ಪಶ್ಚಿಮಬಂಗಾಳ ಮುಖ್ಯಮಂತ್ರಿ ಬುದ್ದದೇವ್ ಭಟ್ಟಾಚಾರ್ಯ ಅವರು ಚಂಡಮಾರುತ ಪರಿಹಾರದ ಸಲಹೆ ಕೋರಲು ಭಾನುವಾರ ಕರೆದಿರುವ ಸರ್ವಪಕ್ಷ ಸಭೆಯಲ್ಲಿ ತಾನು ಭಾಗವಹಿಸುವುದಿಲ್ಲ ಎಂಬುದಾಗಿ ಹೇಳಿರುವ ತೃಣಮೂಲ ಕಾಂಗ್ರೆಸ್, ಈ ಸಂಪೂರ್ಣ ಪ್ರಕ್ರಿಯೆಯೇ ಶಂಕಾಸ್ಪದವಾಗಿದೆ ಎಂದು ಹೇಳಿದೆ,
ಬಂಗಾಳವನ್ನು ಚಂಡಮಾರುತ ಅಪ್ಪಳಿಸಿ ಹಲವು ದಿನಗಳು ಕಳೆದ ಬಳಿಕ ಈ ಸಭೆಯನ್ನು ಕರೆದಿದ್ದು ಈ ಸಂಪೂರ್ಣ ಕಸರತ್ತು 'ಶಂಕಾಸ್ಪದ' ಎಂಬುದಾಗಿ ಲೋಕಸಭೆಯಲ್ಲಿ ತೃಣಮೂಲ ಕಾಂಗ್ರೆಸ್‌ನ ಸಂಸದೀಯ ಪಕ್ಷದ ನಾಯಕ ಸುದೀಪ್ ಬಂಡೋಪಾಧ್ಯಾಯ ಅವರು ಹೇಳಿದ್ದಾರೆ.
"ರಾಜ್ಯಸರ್ಕಾರವು ಚಂಡಮಾರುತ ಬಲಿಪಶುಗಳಿಗೆ ಪರಿಹಾರ ಮತ್ತು ಪುನರ್ವಸತಿ ಕಲ್ಪಿಸಲು ದಯನೀಯವಾಗಿ ಸೋತಿದ್ದು, ಕೇಂದ್ರದಿಂದ ಪಡೆಯುವ ಪರಿಹಾರ ನಿಧಿಗೆ ಸರ್ಕಾರಿ ಮುದ್ರೆಯೊತ್ತುವ ಹತಾಶ ಪ್ರಯತ್ನ ಇದಾಗಿದೆ" ಎಂಬುದಾಗಿ ಸುದೀಪ್ ಹೇಳಿದ್ದಾರೆ.
ಚಂಡಮಾರುತ ಬಲಿಪಶುಗಳಿಗೆ ಪರಿಹಾರ ನೀಡುವ ರಾಜ್ಯ ಸರ್ಕಾರದ ವೈಫಲ್ಯವನ್ನು ಸಂಸತ್ತಿನಲ್ಲಿ ಎತ್ತಬೇಕು ಎಂಬುದಾಗಿ ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಹಾಗೂ ರೈಲ್ವೇ ಸಚಿವೆ ಮಮತಾ ಬ್ಯಾನರ್ಜಿ ಸೂಚಿಸಿರುವುದಾಗಿ ಅವರು ನುಡಿದರು. |