ಸೋನಿಯಾ ಗಾಂಧಿ ಅವರ ವಿದೇಶಿ ಮೂಲದ ಕುರಿತಂತೆ ತನ್ನ ಹತ್ತುವರ್ಷಗಳ ಹಿಂದಿನ ಹೇಳಿಕೆಗೆ ಕ್ಷಮೆ ಯಾಚಿಸಿರುವ ಎನ್‌ಸಿಪಿ ನಾಯಕ, ಮಾಜಿ ಸ್ಪೀಕರ್ ಪಿ.ಎ. ಸಂಗ್ಮಾ ಅವರು ಕಾಂಗ್ರೆಸ್‌ಗೆ ಸೇರುವ ಅಥವಾ ಅದರೊಂದಿಗೆ ವಿಲೀನವಾಗುವ ಪ್ರಶ್ನೆಯೇ ಇಲ್ಲ ಎಂದು ಹೇಳಿದ್ದಾರೆ. ಅಲ್ಲದೆ ನಾನು ಕಾಂಗ್ರೆಸ್‌ಗೆ ಸೇರುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಪ್ರಧಾನಿ ಮನಮೋಹನ್ ಸಿಂಗ್ ಅವರು ಸಂಗ್ಮಾ ಅವರಿಗೆ ಕಾಂಗ್ರೆಸ್ ಸೇರಲು ಆಹ್ವಾನ ನೀಡಿರುವ ವರದಿಗಳಿಗೆ ಪ್ರತಿಕ್ರಿಯಿಸಿರುವ ಸಂಗ್ಮಾ ಕಾಂಗ್ರೆಸ್ ಸೇರುವುದಿಲ್ಲ ಎಂದಿದ್ದಾರೆ. ಸೋನಿಯಾ ಗಾಂಧಿ ಅವರ ವಿದೇಶಿ ಮೂಲವನ್ನು ಕುರಿತು ಟೀಕಿಸಿದ್ದಕ್ಕಾಗಿ ಶರದ್ ಪವಾರ್, ಸಂಗ್ಮಾ ಹಾಗೂ ತಾರಿಕ್ ಅನ್ವರ್ ಅವರುಗಳನ್ನು ಪಕ್ಷದಿಂದ ಉಚ್ಚಾಟಿಸಲಾಗಿತ್ತು. ಬಳಿಕ ಅವರು ನ್ಯಾಶನಲ್ ಕಾಂಗ್ರೆಸ್ ಪಕ್ಷವನ್ನು ಹುಟ್ಟುಹಾಕಿದ್ದರು.
"ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ಭೇಟಿಯಾಗಿ ನನ್ನ ಪುತ್ರನ ವಿವಾಹ ಸಮಾರಂಭಕ್ಕೆ ಆಹ್ವಾನಿಸಿದ್ದೇನೆ. ಕಾಂಗ್ರೆಸ್‌ಗೆ ಸೇರುವ ವಿಚಾರ ಪ್ರಸ್ತಾಪವಾಗಿಲ್ಲ. ಹಾಗೂ ತಾನು ಶರದ್ ಪವಾರ್ ಜತೆಗೇ ಇರುತ್ತೇನೆ ಮತ್ತು ಅವರೇ ನನ್ನ ನಾಯಕರು" ಎಂದು ಸಂಗ್ಮಾ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದ್ದಾರೆ. |