ಮಹಿಳಾ ಮೀಸಲಾತಿ ಮಸೂದೆ ಏನಾದರೂ ಅಂಗೀಕಾರವಾದರೆ ಲೋಕಸಭೆಯಲ್ಲೇ ವಿಷ ಸೇವಿಸಿ ಆತ್ಮಹತ್ಯೆ ಮಾಡುವುದಾಗಿ ಬೆದರಿಕೆ ಹಾಕಿದ್ದ ಜೆಡಿಯು ಅಧ್ಯಕ್ಷ ಶರದ್ ಯಾದವ್ ಅವರು ಶನಿವಾರ ತನ್ನ ಹೇಳಿಕೆಯಿಂದ ನುಣುಚಿಕೊಳ್ಳಲು ಪ್ರಯತ್ನಿಸಿದರಾದರೂ, ಮಹಿಳಾ ಮೀಸಲಾತಿ ಮಸೂದೆಯನ್ನು ಅದರ ಪ್ರಸ್ತುತ ಸ್ವರೂಪದಲ್ಲಿ ಅಂಗೀಕರಿಸುವುದಕ್ಕೆ ಬಲವಾದ ವಿರೋಧ ವ್ಯಕ್ತಪಡಿಸಿದ್ದಾರೆ.
ಮಹಿಳಾ ಮೀಸಲಾತಿ ಮಸೂದೆಯ ಪ್ರಸಕ್ತ ರೂಪವು ಸಮಾಜದ ಆಯ್ದ ವರ್ಗದ ಮಹಿಳೆಯರಿಗೆ ಮಾತ್ರ ಅವಕಾಶ ನೀಡುತ್ತದೆ ಎಂದ ಅವರು ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ ಹಾಗೂ ಇತರ ಹಿಂದುಳಿದ ಜಾತಿ ಹಾಗೂ ಅಲ್ಪಸಂಖ್ಯಾತ ಮಹಿಳೆಯರಿಗೂ ಅವಕಾಶ ಲಭಿಸುವಂತೆ ಮಸೂದೆಗೆ ತಿದ್ದುಪಡಿ ಮಾಡಿ ಶೇ.50ರಷ್ಟು ಮೀಸಲಾತಿ ಒದಗಿಸಬೇಕು ಎಂದು ಪತ್ರಿಕಾಗೋಷ್ಠಿಯಲ್ಲಿ ಒತ್ತಾಯಿಸಿದ್ದಾರೆ.
"ಸಾಕ್ರೆಟಿಸ್ (ಗ್ರೀಕ್ ತತ್ವಶಾಸ್ತ್ರಜ್ಞ) ಅವರು ತಾನಾಗಿ ವಿಷ ಸೇವಿಸಲಿಲ್ಲ. ಅವರು ಸತ್ಯವನ್ನು ಮಾತನಾಡಿರುವುದಕ್ಕೆ ಅವರಿಗೆ ವಿಷ ಉಣಿಸಲಾಯಿತು. ನಾನೊಬ್ಬ ಹೋರಾಟಗಾರ ಮತ್ತು ನಾನು ಬಿಟ್ಟುಕೊಡಲಾರೆ" ಎಂದ ಅವರು ತಾನು ವಿಷ ಸೇವಿಸುತ್ತೇನೆ ಎಂದು ಹೇಳಲೇ ಇಲ್ಲ ಎನ್ನುತ್ತಾ ಸ್ಪಷ್ಟಪಡಿಸಿದರು.
"ನಾನು ಲೋಕಸಭೆಯಲ್ಲಿ ಹೇಳಿರುವುದನ್ನು ಅದರ ನಿಜವಾದ ಸ್ಫೂರ್ತಿಯಲ್ಲಿ ಅರಿತುಕೊಳ್ಳಬೇಕು, ಬರಿಯ ಪದಗಳ ವರ್ಣನೆ ಮಾತ್ರ ಸಲ್ಲ" ಎಂಬುದಾಗಿ ಶರದ್ ಯಾದವ್ ನುಡಿದರು. ಅವರು ದೀರ್ಘಕಾಲದಿಂದ ಈ ಮಸೂದೆಯನ್ನು ವಿರೋಧಿಸುತ್ತಲೇ ಬಂದಿದ್ದಾರೆ.
ಶುಕ್ರವಾರ ಲೋಕಸಭೆಯಲ್ಲಿ ರಾಷ್ಟ್ರಪತಿಗಳ ಭಾಷಣದ ವಂದನಾ ನಿರ್ಣಯದ ಚರ್ಚೆಯಲ್ಲಿ ಭಾಗವಹಿಸಿದ್ದ ಶದರ್ ಅವರು, "ನಮ್ಮ ಬಳಿ ಸಂಖ್ಯೆಗಳು ಇಲ್ಲದಿರಬಹುದು. ನಾನು ವಿಷಸೇವಿಸಿ ಇಲ್ಲಿಯೇ ಸತ್ತೇನೇ ಹೊರತು ಮಹಿಳಾ ಮೀಸಲಾತಿ ಮಸೂದೆಯು ಅದರ ಪ್ರಸಕ್ತ ಸ್ವರೂಪದಲ್ಲೇ ಅಂಗೀಕಾರವಾಗಲು ಬಿಡೆನು" ಎಂದು ಹೇಳಿದ್ದರು.
ಗ್ರೀಕ್ ತತ್ವಶಾಸ್ತ್ರಜ್ಞ ಸಾಕ್ರೆಟಿಸ್‌ನನ್ನು ಪ್ರಸ್ತಾಪಿಸಿದ್ದ ಅವರು, "ಸಾಕ್ರೆಟಿಸ್‌ನಿಗೆ ವಿಷ ಸೇವಿಸುವಂತೆ ಅಥವಾ ತನ್ನ ದೃಷ್ಟಿಕೋನದೊಂದಿಗೆ ರಾಜಿ ಮಾಡಿಕೊಳ್ಳಲು ಒತ್ತಾಯಿಸಲಾಯಿತು. ಆತ ವಿಷವನ್ನು ಆಯ್ದುಕೊಂಡ" ಎಂದಿದ್ದರು. |