ಲಷ್ಕರೆ-ಇ-ತೋಯ್ಬಾ ಉಗ್ರಗಾಮಿ ಸಂಘಟನೆಯ ಸಂಸ್ಥಾಪಕ ಹಫೀಜ್ ಸಯೀದ್‌ನ ಶಂತಕಿತ ಸಹಚರ, ದೆಹಲಿ ಪೊಲೀಸರು ಬಂಧಿಸಿರುವ ಮೊಹಮದ್ ಒಮರ್ ಮದನಿಯನ್ನು, 2006ರ ಜುಲೈ 11ರಂದು ನಡೆಸಲಾಗಿರುವ ಸರಣಿ ರೈಲು ಸ್ಫೋಟಕ್ಕೆ ಸಂಬಂಧಿಸಿದಂತೆ ಮುಂಬೈ ಪೊಲೀಸರು ಪ್ರಶ್ನಿಸುವ ಸಾಧ್ಯೆ ಇದೆ.
"ನಾವು ದೆಹಲಿ ಪೊಲೀಸ್ ಪ್ರಾಧಿಕಾರದ ಸಂಪರ್ಕದಲ್ಲಿದ್ದು, ಅವರಿಂದ ಹೆಚ್ಚಿನ ಮಾಹಿತಿ ಲಭಿಸಿದ ಬಳಿಕ ನಮ್ಮ ತಂಡವನ್ನು ಆತನ ತನಿಖೆಗಾಗಿ ಕಳುಹಿಸಲಾಗುವದು" ಎಂಬುದಾಗಿ ಎಡಿಜಿ (ಭಯೋತ್ಪಾದನಾ ನಿಗ್ರಹದಳ) ಕೆ.ಪಿ. ರಘುವಂಶಿ ಪಿಟಿಐಗೆ ತಿಳಿಸಿದ್ದಾರೆ.
180 ಮಂದಿಯನ್ನು ಬಲಿತೆಗೆದುಕೊಂಡಿರುವ ರೈಲು ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಎಟಿಎಸ್ ಬಂಧಿಸಿರುವ ಕಮಲ್ ಅನ್ಸಾರಿಯನ್ನು ಬಂಧಿತ ಮದನಿ ಲಷ್ಕರೆಗೆ ನೇಮಿಸಿದ್ದಾನೆ ಎಂದು ದೆಹಲಿ ಪೊಲೀಸರು ಹೇಳಿದ್ದಾರೆ.
ರೈಲುಗಳಲ್ಲಿ ಬಾಂಬು ಇರಿಸಿರುವ ಆಪಾದನೆಯ ಮೇಲೆ ಅನ್ಸಾರಿ ಸೇರಿದಂತೆ ಇತರ 13 ಮಂದಿಯನ್ನು ಬಂಧಿಸಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎಟಿಎಸ್ ಆರೋಪಪಟ್ಟಿ ಸಲ್ಲಿಸಿದೆ.
ಮದನಿಯನ್ನು ದೆಹಲಿ ಪೊಲೀಸರು ಗುರುವಾರ ಸಾಯಂಕಾಲ ಬಂಧಿಸಿದ್ದರು. ಆತ ಭಾರತದ ಪ್ರಮುಖ ನಗರಗಳಲ್ಲಿ ಲಷ್ಕರೆ ಸಂಘಟನೆಗೆ ಯುವಕರನ್ನು ನೇಮಿಸಲು ಭಾರತಕ್ಕೆ ಬಂದಿದ್ದಾನೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ. |