ಕಾಂಗ್ರೆಸ್ ಮುಖಂಡನ ಹತ್ಯೆ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಎನ್‌ಸಿಪಿ ಸಂಸದ, ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಪದ್ಮಾಸಿನ್ನಾ ಪಾಟೀಲ್ ಅವರನ್ನು ಶನಿವಾರ ತಡರಾತ್ರಿ ಸಿಬಿಐ ಅಧಿಕಾರಿಗಳು ಬಂಧಿಸಿರುವುದಾಗಿ ಮೂಲಗಳು ತಿಳಿಸಿವೆ.
2006ರಲ್ಲಿ ಕಾಂಗ್ರೆಸ್ ಮುಖಂಡ ಪವನ್ ರಾಜೆ ನಿಂಬಾಳ್ಕರ್ ಅವರ ಹತ್ಯೆ ಪ್ರಕರಣದಲ್ಲಿ ಭಾಗಿ ಎಂಬ ಆರೋಪದ ಮೇಲೆ ಎನ್‌ಸಿಪಿ ವರಿಷ್ಠ ಶರದ್ ಪವಾರ್ ಅವರಿಗೆ ಆತ್ಮೀಯರಾಗಿರುವ ಪಕ್ಷದ ಸಂಸದ ಪಾಟೀಲ್ ಅವರನ್ನು ಬಂಧಿಸಿರುವುದು ರಾಷ್ಟ್ರ ರಾಜ್ಯಕಾರಣದಲ್ಲಿ ಮತ್ತೊಂದು ವಿವಾದಕ್ಕೆ ಎಡೆಮಾಡಿಕೊಟ್ಟಿದೆ.
ಉಸ್ಮಾನಾಬಾದ್ ಲೋಕಸಭಾ ಕ್ಷೇತ್ರದಿಂದ ಆಯ್ಕೆಯಾಗಿರುವ ಪಾಟೀಲ್ ಅವರನ್ನು ವಿಚಾರಣೆಯ ಅಂಗವಾಗಿ ಬಂಧಿಸಲಾಗಿದೆ ಎಂದು ಸಿಬಿಐ ಮೂಲಗಳು ತಿಳಿಸಿದೆ.
ಬಂಧಿತ ಸಂಸದ ಪಾಟೀಲ್ ಅವರನ್ನು ಭಾನುವಾರ ಪನ್ವೆಲ್ ನ್ಯಾಯಾಲಯಕ್ಕೆ ಹಾಜರುಪಡಿಸುವ ಸಾಧ್ಯತೆ ಇರುವುದಾಗಿ ಮೂಲಗಳು ಹೇಳಿವೆ. ನಿಂಬಾಳ್ಕರ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲ ದಿನಗಳ ಮೊದಲು ಇಬ್ಬರನ್ನು ಬಂಧಿಸಲಾಗಿತ್ತು. |