ಖಾಸಗಿ ಕ್ಷೇತ್ರದಲ್ಲಿ ಮೀಸಲಾತಿ ನೀಡುವ ಸಂಬಂಧ ಸರ್ಕಾರ ದೃಢ ನಿರ್ಧಾರ ತೆಗೆದುಕೊಳ್ಳಬಯಸಿದ್ದು, ಅಮೆರಿಕ ಮಾದರಿಯನ್ನು ಅನುಸರಿಸಲು ಚಿಂತನೆ ನಡೆಸಿದೆ ಎಂದು ಕೇಂದ್ರ ಕಾನೂನು ಸಚಿವ ವೀರಪ್ಪ ಮೊಯ್ಲಿ ಹೇಳಿದರು.ದೇಶಾದ್ಯಂತ ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಇರುವ ಉದ್ದಿಮೆಗಳು ಈ ಮೀಸಲಾತಿ ನಿಯಮವನ್ನು ಅನುಸರಿಸಬೇಕು. ಅಮೆರಿಕದಲ್ಲಿ 1960ರಷ್ಟು ಹಿಂದೆಯೇ ಎಲ್ಲರಿಗೂ ಸಮಾನ ಅವಕಾಶ ನೀಡುವ ಸಮಾನತೆ ಕಾಯ್ದೆ ಅಳವಡಿಸಲಾಗಿದೆ. ಅಲ್ಲಿನ ಬಹುರಾಷ್ಟ್ರೀಯ ಕಂಪೆನಿಗಳು ಹಲವು ದಶಕಗಳಿಂದ ಮೀಸಲಾತಿ ಅನ್ವಯ ಸಾಮಾಜಿಕವಾಗಿ ಹಿಂದುಳಿದವರಿಗೆ ಉದ್ಯೋಗ ನೀಡುತ್ತಿವೆ. ಸಾಮಾಜಿಕ ಹೊಣೆಗಾರಿಕೆ ಪರಿಕಲ್ಪನೆ ಅಲ್ಲಿದೆ ಎಂದರು.ಔಟ್ ಲುಕ್ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಈ ವಿಚಾರ ಬಹಿರಂಗಪಡಿಸಿರುವ ಅವರು, ಉನ್ನತ ನ್ಯಾಯಾಂಗ ವ್ಯವಸ್ಥೆಯಲ್ಲಿ ಮೀಸಲಾತಿ ನೀಡುವ ಪ್ರಸ್ತಾಪ ಸರ್ಕಾರದ ಮುಂದೆ ಇಲ್ಲ ಎಂದು ಸ್ಪಷ್ಟಪಡಿಸಿದರು. ಕೆಳ ಹಂತದ ನ್ಯಾಯಾಂಗ ವ್ಯವಸ್ಥೆಯಲ್ಲಿ ಈಗಾಗಲೇ ಮೀಸಲಾತಿ ಜಾರಿಗೊಳಿಸಲಾಗಿದೆ. |