ಮಹಾರಾಷ್ಟ್ರ ಕಾಂಗ್ರೆಸ್ ಘಟಕದ ಮುಖಂಡ ಪವನ್‌ರಾಜೇ ಮತ್ತು ಅವರ ಕಾರು ಚಾಲಕನ ಕೊಲೆ ಪ್ರಕರಣದಲ್ಲಿ ಬಂಧಿತರಾಗಿರುವ ಎನ್‌ಸಿಪಿಯ ಮುಖಂಡ, ಸಂಸದ ಪದಮ್‌ಸಿನ್ನಾ ಪಾಟೀಲ್ ಬಂಧನದ ಹಿನ್ನೆಲೆಯಲ್ಲಿ ಅವರನ್ನು ವಜಾಗೊಳಿಸುವಂತೆ ಪಕ್ಷದ ವರಿಷ್ಠ ಶರದ್ ಪವಾರ್ ಮೇಲೆ ಬಲವಾದ ಒತ್ತಡ ಬೀಳತೊಡಗಿದೆ.
ತಮ್ಮ ನಿಕಟ ಮಿತ್ರ ಹಾಗೂ ಪಕ್ಷದ ಸಂಸದನ ಬಂಧನದಿಂದಾಗಿ ತೀವ್ರ ಬಿಕ್ಕಟ್ಟಿಗೆ ಸಿಲುಕಿರುವ ಕೇಂದ್ರ ಕೃಷಿ ಸಚಿವ ಮತ್ತು ಎನ್‌ಸಿಪಿಯ ಅಧ್ಯಕ್ಷ ಶರದ್ ಪವಾರ್ ಕಾನೂನು ಕ್ರಮ ಕೈಗೊಳ್ಳುತ್ತದೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ಕಾಂಗ್ರೆಸ್ ಮುಖಂಡ ನಿಂಬಾಳ್ಕರ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶನಿವಾರ ತಡರಾತ್ರಿ ಸಿಬಿಐ ಪಾಟೀಲ್ ಅವರನ್ನು ವಶಕ್ಕೆ ತೆಗೆದುಕೊಂಡಿತ್ತು. ಭಾನುವಾರ ನ್ಯಾಯಾಲಯಕ್ಕೆ ಅವರನ್ನು ಹಾಜರುಪಡಿಸಿತ್ತು, ಜೂನ್ 9ರವರೆಗೆ ಸಿಬಿಐ ಕಸ್ಟಡಿಗೆ ಒಪ್ಪಿಸಿದೆ.
ಏತನ್ಮಧ್ಯೆ ಪಕ್ಷದ ಸಂಸದರೂ, ನಿಕಟವರ್ತಿಯೂ ಆಗಿರುವ ಪದಮ್‌ಸಿನ್ನಾ ಅವರನ್ನು ಸಂಸದ ಸ್ಥಾನದಿಂದ ವಜಾಗೊಳಿಸುವಂತೆ ಪ್ರತಿಪಕ್ಷಗಳು ಹೇರತೊಡಗಿದ್ದಾರೆ. ಇದರಿಂದಾಗಿ ತೀವ್ರ ಮುಜುಗರಕ್ಕೆ ಈಡಾಗಿರುವ ಪವಾರ್ ಪಾಟೀಲ್ ವಿರುದ್ಧ ಕ್ರಮ ಕೈಗೊಳ್ಳುತ್ತಾರೆಯೇ ಎಂಬುದನ್ನು ಕಾದು ನೋಡಬೇಕಾಗಿದೆ.
ಕ್ಲೀನ್ ಚಿಟ್?: ಒಂದೆಡೆ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪದಮ್ ಸಿನ್ನಾ ಅವರನ್ನು ಸಿಬಿಐ ವಶಕ್ಕೆ ತೆಗೆದುಕೊಂಡಿದ್ದು, ಮತ್ತೊಂದೆಡೆ ಮಹಾರಾಷ್ಟ್ರ ಗೃಹ ಸಚಿವ ಆರ್.ಆರ್.ಪಾಟೀಲ್ ಸಿನ್ನಾಗೆ ಕ್ಲೀನ್ ಚಿಟ್ ನೀಡಿದ್ದಾರೆ. 'ನಾನು ನಿರಪರಾಧಿ ನನ್ನನ್ನು ವಿನಾಃ ಕಾರಣ ಈ ಪ್ರಕರಣದಲ್ಲಿ ಬಂಧಿಸಲಾಗಿದೆ ಎಂದು ಸಿನ್ನಾ ಅಲವತ್ತುಕೊಂಡಿದ್ದಾರೆ. |