ಎಸ್‌ಎನ್‌ಸಿ ಲ್ಯಾವಲಿನ್ ಹಗರಣಕ್ಕೆ ಸಂಬಂಧಿಸಿದಂತೆ ಕಮ್ಯೂನಿಸ್ಟ್ ಪಾರ್ಟಿ ಆಫ್ ಇಂಡಿಯಾ(ಎಂ)ನ ರಾಜ್ಯ ಕಾರ್ಯದರ್ಶಿ ಪಿಣರಾಯಿ ವಿಜಯನ್ ಅವರನ್ನು ತನಿಖೆಗೆ ಒಳಪಡಿಸುವಂತೆ ಕೇರಳ ರಾಜ್ಯಪಾಲರು ಆರ್.ಎಸ್.ಗವಾಯಿ ಸಿಬಿಐಗೆ ಆದೇಶ ನೀಡಿದ ತನ್ಮಧ್ಯೆಯೇ, ರಾಜ್ಯಪಾಲರಿಗೆ ಕೊಲೆ ಬೆದರಿಕೆಯ ಕರೆಯೊಂದು ಬಂದಿರುವುದು ಪ್ರಕರಣ ಮತ್ತಷ್ಟು ಗಂಭೀರತೆ ಪಡೆದುಕೊಂಡಿದೆ.
ಬಹುಕೋಟಿ ಲ್ಯಾವಲಿನ್ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯಪಾಲರು ಪಿಣರಾಯಿ ವಿರುದ್ಧ ತನಿಖೆಗೆ ಆದೇಶ ನೀಡಿರುವ ನಿರ್ಧಾರಕ್ಕೆ ಪ್ರತಿಕಾರ ಎಂಬಂತೆ ಸೌದಿ ಅರೇಬಿಯಾದಿಂದ ಕೊಲೆ ಬೆದರಿಕೆಯ ಕರೆಯೊಂದು ಬಂದಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ರಾಜ್ಯಾಪಾಲರ ಈ ನಿರ್ಧಾರವನ್ನು ಖಂಡಿಸಿ ಡಿವೈಎಫ್‌ಐ ಹಾಗೂ ಸಿಪಿಎಂ ಯುವ ಘಟಕ ಭಾನುವಾರ ರಾಜಭವನ ಚಲೋ ಜಾಥಾ ನಡೆಸಿ, ರಾಜ್ಯಪಾಲರ ಪ್ರತಿಕೃತಿಯನ್ನು ಬೆಂಕಿಹಚ್ಚಿ ಸುಟ್ಟು, ಘೋಷಣೆಗಳನ್ನೂ ಕೂಗಿದ್ದರು.
1997ರಲ್ಲಿ ಪಿಣರಾಯಿ ವಿಜಯನ್ ರಾಜ್ಯ ವಿದ್ಯುತ್‌ಚ್ಛಕ್ತಿ ಸಚಿವರಾಗಿದ್ದ ವೇಳೆ ಎರಡು ವಿದ್ಯುತ್‌ಚ್ಛಕ್ತಿ ಕೇಂದ್ರಗಳನ್ನು ಸ್ಥಾಪಿಸಲು ಕೆನಡಾ ಮೂಲದ ಎಸ್‌ಎನ್‌ಸಿ ಲ್ಯಾವಲಿನ್ ಕಂಪೆನಿಯೊಂದಿಗೆ ಅಕ್ರಮವಾಗಿ ಒಪ್ಪಂದ ಮಾಡಿಕೊಂಡಿದ್ದರು.ರಾಜ್ಯಪಾಲರ ಈ ತೀರ್ಮಾನ ಸ್ವಾಗತಿಸಿದ ವಿರೋಧ ಪಕ್ಷದ ನಾಯಕರಾದ ರಮೇಶ್ ಚೆನ್ನಿತಲ ಮತ್ತು ಉಮ್ಮನ್ ಚಾಂಡಿ ಇದು ನ್ಯಾಯಯುತವಾದ ತೀರ್ಮಾನ ಎಂದು ತಿಳಿಸಿದ್ದರು.
ಲ್ಯಾವಲಿನ್ ಹಗರಣ ಕೇರಳ ರಾಜಕಾರಣದಲ್ಲಿ ಸಾಕಷ್ಟು ವಿವಾದ ಹುಟ್ಟು ಹಾಕಿತ್ತು. ಅಲ್ಲದೇ ಅವರನ್ನು ಪಕ್ಷದಿಂದ ವಜಾಗೊಳಿಸುವಂತೆಯೂ ಒತ್ತಡ ಹೇರಲಾಗಿತ್ತಾದರೂ ಪಾಲಿಟ್ ಬ್ಯೂರೋ ಕಠಿಣ ನಿರ್ಧಾರ ಕೈಗೊಳ್ಳದೆ ನುಣುಚಿಕೊಂಡಿತ್ತು. ಕೇರಳದ ಸಿಪಿಎಂ-ಎಲ್‌ಡಿಎಫ್ ನೇತೃತ್ವದ ಸರ್ಕಾರ ಕೂಡ ವಿಜಯನ್ ವಿರುದ್ಧ ಸಾಕಷ್ಟು ಸಾಕ್ಷ್ಯಾಧಾರ ಇಲ್ಲದ ಕಾರಣ ತನಿಖೆ ನಡೆಸಲು ಆದೇಶ ನೀಡಬಾರದು ಎಂಬ ಶಿಫಾರಸಿನ ನಡುವೆಯೂ ರಾಜ್ಯಪಾಲರ ಈ ಆದೇಶ ಹೊರಬಿದ್ದಿದೆ. |