ಮಹಿಳಾ ಮೀಸಲಾತಿ ಮಸೂದೆ ಅಂಗೀಕಾರಕ್ಕೆ ಇದೀಗ ಸಮಾಜವಾದಿ ಪಕ್ಷ ಕೂಡ ತೀವ್ರ ವಿರೋಧ ವ್ಯಕ್ತಪಡಿಸಿದೆ. ಈ ಮೊದಲು ಜೆಡಿಯು ಮುಖಂಡ ಶರದ್ ಯಾದವ್ ವಿರೋಧ ವ್ಯಕ್ತಪಡಿಸಿದ್ದ ಬೆನ್ನಲ್ಲೇ ಮುಲಾಯಂ ಸಿಂಗ್ ಕೂಡ ಅದೇ ಹಾದಿ ಹಿಡಿದಿದ್ದಾರೆ.ತೀವ್ರ ಪೈಪೋಟಿಯ ನಡುವೆ ಸಂಸದರು ಲೋಕಸಭೆಯನ್ನು ಪ್ರವೇಶಿಸಿರುವ ಹಿನ್ನೆಲೆಯಲ್ಲಿ ಮಹಿಳಾ ಮೀಸಲಾತಿ ಮಸೂದೆ ಮಂಡನೆಯ 'ಸಂಚು' ರೂಪಿಸಲಾಗುತ್ತಿದೆ, ಇದೊಂದು ಭಯಾನಕ ಎಂದು ಸಮಾಜವಾದಿ ಪಕ್ಷದ ವರಿಷ್ಠ ಮುಲಾಯಂ ಸಿಂಗ್ ಯಾದವ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.ಇತ್ತೀಚೆಗಷ್ಟೇ ಲೋಕಸಭೆಯಲ್ಲಿ ರಾಷ್ಟ್ರಪತಿಗಳ ಭಾಷಣದ ವಂದನಾ ನಿರ್ಣಯದ ಚರ್ಚೆಯಲ್ಲಿ ಭಾಗವಹಿಸಿದ್ದ ಶದರ್ ಅವರು, "ನಮ್ಮ ಬಳಿ ಸಂಖ್ಯೆಗಳು ಇಲ್ಲದಿರಬಹುದು. ನಾನು ವಿಷಸೇವಿಸಿ ಇಲ್ಲಿಯೇ ಸತ್ತೇನೇ ಹೊರತು ಮಹಿಳಾ ಮೀಸಲಾತಿ ಮಸೂದೆಯು ಅದರ ಪ್ರಸಕ್ತ ಸ್ವರೂಪದಲ್ಲೇ ಅಂಗೀಕಾರವಾಗಲು ಬಿಡೆನು" ಎಂದು ಹೇಳಿದ್ದರು.ಮಹಿಳಾ ಮೀಸಲಾತಿ ಮಸೂದೆ ಪ್ರಸಕ್ತ ಸ್ವರೂಪದಲ್ಲೇ ಅಂಗೀಕಾರವಾದರೆ ಸದನದಲ್ಲೇ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳುವೆ ಎಂಬ ಶರದ್ ಹೇಳಿಕೆ ವ್ಯಾಪಕ ಟೀಕೆಗೆ ಗುರಿಯಾಗಿ ನಂತರ ಅದಕ್ಕೆ ಸಮಜಾಯಿಷಿ ನೀಡಿದ್ದರು. ಗ್ರೀಕ್ ತತ್ವಜ್ಞಾನಿ ಸಾಕ್ರೆಟೀಸ್‌ಗೂ ಕೂಡ ವಿಷ ಉಣಿಸಲಾಗಿತ್ತೇ ವಿನಃ ಆತ ವಿಷ ಸೇವಿಸಿ ಸತ್ತಿರಲಿಲ್ಲ ಎಂದು ಉದಾಹರಣೆ ಮೂಲಕ ವಿವರಣೆ ನೀಡಿದ್ದರು.ಇದೀಗ ಯುಪಿಎಗೆ ಬಾಹ್ಯ ಬೆಂಬಲ ನೀಡಿರುವ ಸಮಾಜವಾದಿ ಪಕ್ಷ ಕೂಡ ಮಹಿಳಾ ಮೀಸಲಾತಿ ಮಸೂದೆ ಅಂಗೀಕಾರಕ್ಕೆ ವಿರೋಧ ವ್ಯಕ್ತಪಡಿಸಿದೆ.ಮಹಿಳಾ ಮೀಸಲಾತಿ ಮಸೂದೆ ಮಂಡನೆ ಮತ್ತಷ್ಟು ವಿಳಂಬ?: ಮಹಿಳಾ ಮೀಸಲಾತಿ ಮಸೂದೆಯು ನೂತನ ಲೋಕಸಭಾ ತಜ್ಞರ ತಂಡದಿಂದ ಸೂಕ್ಷ್ಮ ಪರಿಶೀಲನೆಗೆ ಹೆಚ್ಚಿನ ಸಮಯ ಬೇಕಾಗುತ್ತಿದ್ದರಿಂದ ಮುಂದಿನ ಬಜೆಟ್ ಅಧಿವೇಶನದಲ್ಲಿ ಪ್ರಸ್ತುತ ಮಸೂದೆಯನ್ನು ಮಂಡಿಸಲು ವಿಳಂಬವಾಗುವ ಸಾಧ್ಯತೆ ಇದೆ.ಸದ್ಯ ಈ ಮಸೂದೆಯ ನಿಯಮ ಮತ್ತು ಕಾನೂನು ಸ್ಥಾಯಿ ಸಮಿತಿಯ ಪರಿಶೀಲನೆಯಲ್ಲಿದ್ದು ಇನ್ನಷ್ಟು ವಿಷಯಗಳನ್ನು ಇದರಲ್ಲಿ ಸೇರಿಸಲು ಬಾಕಿ ಇರುವುದರಿಂದ ಮಹಿಳಾ ಮಸೂದೆ ಮಂಡನೆ ಮತ್ತಷ್ಟು ವಿಳಂಬವಾಗಲಿದೆ.ರಾಜ್ಯಸಭೆಯಲ್ಲಿ ಮಂಡಿಸಲಾದ ಈ ಮಸೂದೆಯಲ್ಲಿ ಇನ್ನಷ್ಟು ಸಂಗತಿಗಳನ್ನು ಸೇರಿಸಲು ಆಯೋಗವೊಂದರ ರಚನೆಯಾಗಬೇಕಾಗಿದೆ. ಈ ಮೂಲಕ ಹೊಸ ಕಾನೂನು ಸೇರಿಸಿದ ನಂತರವೇ ಮಸೂದೆಯನ್ನು ಮಂಡಿಸಲಾಗುವುದು. ಪ್ರಸ್ತುತ ಮಸೂದೆಯನ್ನು ಸೂಕ್ಷ್ಮ ಪರಿಶೀಲನೆಗೆ ಒಳಪಡಿಸಿದ ನಂತರ ಆಯೋಗ ಸಂಸತ್‌ಗೆ ತಮ್ಮ ವರದಿ ಸಲ್ಲಿಸಬೇಕಾಗಿದೆ.ಎರಡನೇ ಬಾರಿ ಅಧಿಕಾರದ ಗದ್ದುಗೆ ಹಿಡಿದಿರುವ ಯುಪಿಎ ಸರ್ಕಾರ ನೂರು ದಿನಗಳ ಅಧಿಕಾರವನ್ನು ಪೂರೈಸುವ ವೇಳೆಗೆ ಮಹಿಳಾ ಮೀಸಲಾತಿ ಮಸೂದೆ ಜಾರಿ ಕಾರ್ಯ ಪೂರ್ಣಗೊಳಿಸುವ ಭರವಸೆ ಹೊಂದಿದೆ. |