ಉತ್ತರ ಪ್ರದೇಶದಲ್ಲಿ ನಿರಂಕುಶವಾಗಿ ಮತ್ತು ವಿಚಾರಹೀನ ನೆಲೆಯಲ್ಲಿ ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿರುವ ಮುಖ್ಯಮಂತ್ರಿ ಮಾಯಾವತಿ ಕ್ರಮದ ವಿರುದ್ಧ ದಾಖಲಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ(ಪಿಐಎಲ್)ಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಸೋಮವಾರ ಮಾಯಾ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ.ಸುಪ್ರೀಂಕೋರ್ಟ್ ರಜಾಕಾಲ ಪೀಠದ ನ್ಯಾಯಾಧೀಶರಾದ ಸುದರ್ಶನ್ ರೆಡ್ಡಿ ಮತ್ತು ನ್ಯಾಯಮೂರ್ತಿ ಅಬ್‌ತಾಬ್ ಅಲಾಂ ಅವರನ್ನೊಳಗೊಂಡ ಪೀಠ, ಈ ನೋಟಿಸ್ ಜಾರಿ ಮಾಡಿ ನಾಲ್ಕು ವಾರದೊಳಗೆ ಉತ್ತರ ನೀಡುವಂತೆ ಸೂಚಿಸಿದೆ.ಉತ್ತರ ಪ್ರದೇಶದಲ್ಲಿ ಮುಖ್ಯಮಂತ್ರಿ ಮಾಯಾವತಿಯವರು ಐಎಎಸ್ ಅಧಿಕಾರಿಗಳನ್ನು ವಿವೇಚನಾರಹಿತರಾಗಿ ವರ್ಗಾವಣೆ ಮಾಡಿರುವುದನ್ನು ಪ್ರಶ್ನಿಸಿ ಸತ್ಯಾ ನರೈನ್ ಶುಕ್ಲಾ ಎಂಬವರು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು. ಐಎಎಸ್ ಅಧಿಕಾರಿಗಳನ್ನು ನೈತಿಕ ನೆಲೆಯಲ್ಲಿ ಅವರನ್ನು ವರ್ಗಾವಣೆ ಮಾಡಬೇಕೆ ವಿನಃ, ನಿರಂಕುಶ ನೆಲೆಯಲ್ಲಿ ವರ್ಗಾವಣೆ ಮಾಡುವುದು ಸಂವಿಧಾನ ವಿರೋಧಿ ಕ್ರಮ ಎಂದು ಅರ್ಜಿಯಲ್ಲಿ ದೂರಿದ್ದಾರೆ. |