ಮೀಸಲಾತಿ ಕುರಿತಂತೆ ಎ.ಆರ್.ಅಂತುಳೆ ದಿವ್ಯ ಮೌನ ಧೋರಣೆ ಹೊಂದಿರುವ ನಡುವೆಯೇ, ನೂತನವಾಗಿ ಆಯ್ಕೆಯಾಗಿರುವ ಅಲ್ಪಸಂಖ್ಯಾತ ವ್ಯವಹಾರಗಳ ಖಾತೆ ಸಚಿವ ಸಲ್ಮಾನ್ ಖುರ್ಷಿದ್ ಅವರು ಮೀಸಲಾತಿ ಕುರಿತಂತೆ ವಿಭಿನ್ನ ದೃಷ್ಟಿಕೋನದ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಮುಸ್ಲಿಂ ಮೀಸಲಾತಿಯನ್ನು 'ಎರಡು ಅಲಗಿನ ಕತ್ತಿ'ಯಂತೆ ಎಂದು ಬಣ್ಣಿಸಿರುವ ಖುರ್ಷಿದ್, ಈ ಮೀಸಲಾತಿಯಿಂದಾಗಿ 'ಅಸೂಯೆ, ದ್ವೇಷ ಹಾಗೂ ವಿರೋಧ' ವನ್ನು ಹುಟ್ಟುಹಾಕಲು ಪ್ರೇರಣೆ ಕೊಟ್ಟಂತೆ ಎಂದು ವಿಶ್ಲೇಷಿಸಿದ್ದಾರೆ.
ಸಾಮರ್ಥ್ಯ, ಪ್ರತಿಭೆ ಇದ್ದವರಿಗೆ ಮೀಸಲಾತಿ ನೀಡಿ, ಅದು ಎಲ್ಲರಿಗೂ ಸಹಾಯಕವಾಗುತ್ತದೆ. ಅದನ್ನು ಹೊರತುಪಡಿಸಿ ಈ ತುಷ್ಟೀಕರಣದ ನೀತಿ ಸಮಾಜದಲ್ಲಿ ವಿರೋಧ ಹುಟ್ಟಿಸಲು ಅನುವು ಮಾಡಿಕೊಟ್ಟಂತೆ ಎಂದು ದಿ.ಇಂಡಿಯನ್ ಎಕ್ಸ್‌ಪ್ರೆಸ್ ನೀಡಿದ ಸಂದರ್ಶನದಲ್ಲಿ ವಿವರಿಸಿದ್ದಾರೆ.
ಮೀಸಲಾತಿ ಎಂಬುದು ಅದು ಮತ್ತೊಂದು ದೃಷ್ಟಿಕೋನದಿಂದ ಸ್ಫೋಟಗೊಳ್ಳುತ್ತೆ. ಆದರೆ ಈ ಮೀಸಲಾತಿ ಜಾರಿಯಿಂದ ಶೀಘ್ರವೇ ಏನಾದರು ಅವಘಡ ನಡೆಯುತ್ತೆ ಎಂಬುದನ್ನು ತಳ್ಳಿಹಾಕಿದ ಅವರು, ಆ ನಿಟ್ಟಿನಲ್ಲಿ ನ್ಯಾಯಮೂರ್ತಿ ರಾಜೇಂದರ್ ಸಾಚಾರ್ ಸಮಿತಿ ನೀಡಿರುವ ಕೆಲವೊಂದು ಶಿಫಾರಸುಗಳನ್ನು ಅನುಷ್ಠಾನಕ್ಕೆ ತರುವ ಬಗ್ಗೆ ಒಲವು ವ್ಯಕ್ತಪಡಿಸಿದರು.
'ನೀವು ಯಾರನ್ನೊ ತೃಪ್ತಿಪಡಿಸುವ ನಿಟ್ಟಿನಲ್ಲಿ ಇಂತಹ ನಿರ್ಧಾರಗಳನ್ನು ಕೈಗೊಳ್ಳುವುದು ಅಪಾಯಕಾರಿ ಎಂದು ಎಚ್ಚರಿಸಿದ ಖುರ್ಷಿದ್, ಇದರಿಂದ ಹೆಚ್ಚಿನ ಲಾಭವಾಗಲಾರದು ಎಂದು ಸಂದರ್ಶನದಲ್ಲಿ ಹೇಳಿದರು.
ಮೀಸಲಾತಿ ಕುರಿತಂತೆ ನಾವು ಮತ್ತೊಂದು ದೃಷ್ಟಿಕೋನದಿಂದ ನಾವೆಲ್ಲ ಚರ್ಚಿಸಬೇಕಾದ ಅಗತ್ಯವಿದೆ, ಎಲ್ಲಾ ರೀತಿಯ ಸವಲತ್ತು ದೊರೆಯುವ ಮೀಸಲಾತಿ ಬಗ್ಗೆ ಚಿಂತನೆ ಅಗತ್ಯ. ಆದರೆ ಮುಸ್ಲಿಂರಿಗಾಗಿ ನೀಡುವ ಮೀಸಲಾತಿ ಎರಡು ಅಲಗಿನ ಕತ್ತಿಯಂತೆ, ಇದರಿಂದಾಗಿ ದ್ವೇಷ, ಅಸೂಯೆ ಹಾಗೂ ವಿರೋಧವನ್ನು ಹುಟ್ಟುಹಾಕುತ್ತೆ ಎಂದು ನುಡಿದರು. |