ಬಿಜೆಯು ಪಾಕಿಸ್ತಾನದ ತುಷ್ಟಿಕರಣ ನೀತಿಯನ್ನು ಹೊಂದಿತ್ತು ಎಂದು ಸೋಮವಾರ ಆಪಾದಿಸಿರುವ ಕಾಂಗ್ರೆಸ್, ಎನ್‌ಡಿಎ ಆಡಳಿತ ವೇಳೆಯಲ್ಲಿ ಇಸ್ಲಾಮಾಬಾದ್ ವಿರುದ್ಧ ಮೆದು ಧೋರಣೆ ತಳೆದಿರುವುದಕ್ಕೆ ಹಲವು ಉದಾಹರಣೆಗಳಿವೆ ಎಂದು ಹೇಳಿದೆ.
ರಾಜ್ಯಸಭೆಯಲ್ಲಿ ರಾಷ್ಟ್ರಪತಿಗಳ ಭಾಷಣದ ವಂದನಾ ನಿರ್ಣಯದ ಕುರಿತು ಚರ್ಚೆಯ ವೇಳೆಗೆ ಕಾಂಗ್ರೆಸ್ ಸಂಸದ ರಾಜೀವ್ ಶುಕ್ಲಾ ಅವರು ಬಿಜೆಪಿ ಮೇಲೆ ಹರಿಹಾಯ್ದರು. ಬಿಜೆಪಿಯು ಪದೇಪದೇ ಕಾಂಗ್ರೆಸ್ ಪಾಕಿಸ್ತಾನದ ವಿರುದ್ಧ ಮೆದುಧೋರಣೆ ತಳೆದಿದೆ ಎಂಬುದಾಗಿ ದೂರುತ್ತಿರುವುದಕ್ಕೆ ಪ್ರತ್ಯುತ್ತರ ನೀಡಿರುವ ಶುಕ್ಲಾ ಈ ಆಪಾದನೆ ಮಾಡಿದ್ದಾರೆ.
ಮೊಹಮ್ಮದ್ ಅಲಿ ಜಿನ್ನಾ ಅವರ ಸಮಾಧಿಗೆ ಚಾದರ್ ನೀಡಿರುವುದು, ಲಾಹೋರ್ ಬಸ್ ಸೇವೆ ಆರಂಭಿಸಿರುವುದು, ಪಾಕಿಸ್ತಾನದ ಆಗಿನ ಅಧ್ಯಕ್ಷ ಪರ್ವೇಜ್ ಮುಶರಫ್ ಅವರನ್ನು ಆಗ್ರಾಕ್ಕೆ ಆಹ್ವಾನಿಸಿ ರಾಷ್ಟ್ರವನ್ನು ಅವಮಾನಿಸಿರುವುದು, ಕಾಂಧಹಾರ್ ವಿಮಾನ ಅಪಹರಣ ವೇಳೆಗೆ ಉಗ್ರರನ್ನು ಬಿಡುಗಡೆ ಮಾಡುವ ಮೂಲಕ ಜೈಶೆ-ಇ-ಮೊಹಮ್ಮದ್ ಸಂಘಟನೆಯನ್ನು ಬಲಪಡಿಸಿರುವುದು ಸೇರಿದಂತೆ ಹಲವಾರು ಉದಾಹರಣೆಗಳಿವೆ ಎಂದು ಅವರು ನುಡಿದರು.
ಪಾಕಿಸ್ತಾನಕ್ಕೆ ಮುಂಬೈ ದಾಳಿಯ ಪುರಾವೆಗಳನ್ನು ನೀಡಿರುವ ಕುರಿತು ಟೀಕಿಸುತ್ತಾ ಬಿಜೆಪಿಯ ನಾಯಕ ಅರುಣ್ ಶೌರಿ ಮಾಡಿರುವ ಟೀಕೆಗಳಿಗೆ ಉತ್ತರಿಸಿದ ಶುಕ್ಲಾ, ಪಾಕಿಸ್ತಾನದ ವಿರುದ್ಧ ಮೆದು ಧೋರಣೆ ತಳೆದವರು ಯಾರು ಎಂಬುದು ಎಲ್ಲರಿಗೂ ಗೊತ್ತು ಎಂದರು. |