ಮದ್ರಸಾಗಳಲ್ಲಿನ ಶಿಕ್ಷಣ ಕ್ರಮವನ್ನು ಪುನಾರಚಿಸಬೇಕು ಎಂದಿರುವ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಕಪಿಲ್ ಸಿಬಾಲ್, ಮುಸ್ಲಿಂ ಯುವಕರನ್ನು ಸಶಕ್ತಗೊಳಿಸಲು ಧಾರ್ಮಿಕ ಶಿಕ್ಷಣದೊಂದಿಗೆ ವೃತ್ತಿಪರ ತರಬೇತಿಯನ್ನೂ ನೀಡಬೇಕು ಎಂದು ಹೇಳಿದ್ದಾರೆ.
ಅದಾಗ್ಯೂ, ಮದ್ರಸಾಗಳಲ್ಲಿನ ಧಾರ್ಮಿಕ ಬೋಧನೆಯಲ್ಲಿ ತಮ್ಮ ಸಚಿವಾಲಯವು ಮೂಗು ತೂರಿಸದು ಎಂಬುದಾಗಿ ಅವರು ಸ್ಪಷ್ಟಪಡಿಸಿದ್ದಾರೆ.
"ಈ ಕುರಿತು ಘೋಷಣೆ ಮಾಡಲಾಗುವುದು. ಇದು 100 ದಿನಗಳ ಕಾರ್ಯಸೂಚಿಯ ಒಂದು ಅಂಗವಾಗಿದೆ. ಮದ್ರಸಾಗಳಲ್ಲಿನ ಶಿಕ್ಷಣದ ಪುನಾರಚನೆಯ ಬಗ್ಗೆ ಮಾತನಾಡುವಾಗ ನಾವು ಮದ್ರಸಾಗಳಲ್ಲಿನ ಧಾರ್ಮಿಕ ಬೋಧನೆಗಳ ಕುರಿತು ಮೂಗು ತೂರಿಸುವುದಿಲ್ಲ. ಅದೇ ವೇಳೆ ಮುಸ್ಲಿಂ ಯುವಕರನ್ನು ಸಬಲೀಕರಣಗೊಳಿಸುವುದು ನಮ್ಮ ಉದ್ದೇಶ" ಎಂದು ಸಿಬಾಲ್ ಅವರು ಪಿಟಿಐಗೆ ನೀಡಿರುವ ಸಂದರ್ಶನದಲ್ಲಿ ಹೇಳಿದ್ದಾರೆ.
"ಮುಸ್ಲಿಂ ಯುವಕರು ಶಾಲೆಯಿಂದ ಹೊರತೆರಳುವ ವೇಳೆಗೆ ಅವರು ಉದ್ಯೋಗಾವಕಾಶಗಳನ್ನು ಪಡೆಯುವಂತಾಗಬೇಕು. ಅವರ ಬಳಿ ಕೌಶಲ್ಯವಿದೆ. ಅವರಿಗೆ ಸೂಕ್ತ ಶಿಕ್ಷಣ ಲಭಿಸಿದರೆ ಇದರಿಂದಾಗಿ ಅವರು ಮುಖ್ಯವಾಹಿನಿಯ ಅಂಗವಾಗುತ್ತಾರೆ" ಎಂದು ಸಿಬಾಲ್ ಹೇಳಿದ್ದಾರೆ.
ಮದ್ರಸಾದ ವಿದ್ಯಾಭ್ಯಾಸವನ್ನು ಸಿಬಿಎಸ್ಇಗೆ ಸಮವಾಗಿಸಲು ಸರ್ಕಾರವು ಈಗಾಗಲೇ ನಿರ್ಧರಿಸಿದ್ದು, ಮುಸ್ಲಿಂ ವಿದ್ಯಾರ್ಥಿಗಳು ಇದರಿಂದಾಗಿ ಕೇಂದ್ರ ಸರ್ಕಾರಿ ಕೆಲಸಗಳನ್ನು ಪಡೆಯುವಂತಾಗುತ್ತದೆ. ಆದರೆ, ಈ ಉಪಯೋಗವು 10 ರಾಜ್ಯಗಳಲ್ಲಿರುವ ರಾಜ್ಯ ಮದ್ರಸಾ ಮಂಡಳಿಯ ಅಂಗವಾಗಿರುವ ಮದ್ರಸಾಗಳಿಗೆ ಮಾತ್ರ ಲಭಿಸಲಿದೆ ಎಂದವರು ಹೇಳಿದರು. |