ಮಹಿಳಾ ಮೀಸಲಾತಿ ಮಸೂದೆಯು ಈಗಿನ ಸ್ವರೂಪದಲ್ಲೇ ಜಾರಿಯಾಗಬಾರದು ಎಂಬುದಾಗಿ ವಿರೋಧಿಸುತ್ತಿರುವ ಮುಲಾಯಂ ಸಿಂಗ್ ಯಾದವ್‌ಗೆ ಸಾಥ್ ನೀಡಿರುವ ಲಾಲೂ ಪ್ರಸಾದ್ ಯಾದವ್, ಮಸೂದೆಯು ಹಿಂದುಳಿದ ವರ್ಗಗಳು ಮುಂದೆ ಬರಬಾರದು ಮತ್ತು ಪ್ರಾದೇಶಿಕ ಪಕ್ಷಗಳನ್ನು ಮುಗಿಸಿಬಿಡಬೇಕು ಎಂದು ಹೂಡಿರುವ ಸಂಚು ಎಂಬುದಾಗಿ ಆರೋಪಿಸಿದ್ದಾರೆ.
ಉತ್ತರಪ್ರದೇಶದ ಮಾಜಿ ಮುಖ್ಯಮಂತ್ರಿ ಕಲ್ಯಾಣ್ ಸಿಂಗ್ ಅವರೂ ಲಾಲೂ ಪ್ರಸಾದ್ ಯಾದವ್‌ರಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಇತರ ಹಿಂದುಳಿದ ವರ್ಗಗಳು ಮತ್ತು ಅಲ್ಪಸಂಖ್ಯಾತರನ್ನು ಮಸೂದೆಯಲ್ಲಿ ಸೇರಿಸದಿದ್ದರೆ ಬೃಹತ್ ಚಳುವಳಿ ನಡೆಸುವುದಾಗಿ ಹೇಳಿದ್ದಾರೆ.
ರಾಷ್ಟ್ರಪತಿಗಳ ಭಾಷಣದ ವಂದನಾ ನಿರ್ಣಯದ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು "ಇದರಲ್ಲಿ ಸಂಚು ಇದೆ ಎಂದು ಮುಲಾಯಂ ಸಿಂಗ್ ಯಾದವ್ ಹೇಳಿದ್ದರು ಮತ್ತು ನಾನದನ್ನು ಈಗ ಎತ್ತಿತೋರಿಸುತ್ತಿದ್ದೇನೆ" ಎಂದು ನುಡಿದರು.
"ಹಿಂದುಳಿದ ವರ್ಗಗಳಿಗೆ ಪ್ರಾತಿನಿಧ್ಯದ ಅಗತ್ಯವಿದೆ. ಹಾಗಾಗಿ ಮೀಸಲಾತಿಯೊಳಗೆ ಮೀಸಲಾತಿಯ ಅವಶ್ಯಕತೆ ಇದೆ. ಇದನ್ನು ಮಾಡದೇ ಇದ್ದರೆ ಮಸೂದೆಯ ಅಂಗೀಕಾರಕ್ಕೆ ನಾವು ಒಪ್ಪುವುದಿಲ್ಲ" ಎಂದು ಮಾಜಿ ರೈಲ್ವೇ ಸಚಿವರು ಹೇಳಿದರು. ಲಾಲು ಅವರ ಮಾತಿಗೆ ಸಹಮತ ವ್ಯಕ್ತಪಡಿಸಿದ ಕಲ್ಯಾಣ್ ಸಿಂಗ್, ಹಿಂದುಳಿದ ವರ್ಗಗಳವರನ್ನು ಅಭಿವೃದ್ಧಿ ಮತ್ತು ಅಧಿಕಾರದಿಂದ ದೂರ ಇಡಲು ಇದೊಂದು ದೊಡ್ಡ ಸಂಚು ಮತ್ತು ಆಡಳಿತಾರೂಢ ಕಾಂಗ್ರೆಸ್ ಮತ್ತು ವಿಪಕ್ಷ ಬಿಜೆಪಿಯು ಇದರಲ್ಲಿ ಪಾಲ್ಗೊಂಡಿದೆ ಎಂದು ಅವರು ಆಪಾದಿಸಿದರು. |