ಇದು ಬಾನಂಗಳದಲ್ಲಿ ನಡೆಯಲಿರುವ ಅಪೂರ್ವ ಕೌತುಕ, ಜುಲೈ 22ರಂದು ಭಾರತದ ಆಗಸದಲ್ಲಿ ಪೂರ್ಣ ಸೂರ್ಯಗ್ರಹಣ ಜರುಗಲಿದೆ. ಇಂಥ ಅವಕಾಶ ಮತ್ತೆ ಸಿಗುವುದು 78 ವರ್ಷಗಳ ಬಳಿಕವಾದ್ದರಿಂದ ಇದು ಅಪರೂಪದ ವಿದ್ಯಮಾನವಾಗಿದೆ.ಕಳೆದ 15ವರ್ಷಗಳಲ್ಲಿ ಭಾರತದಲ್ಲಿ ಕಂಡು ಬರುತ್ತಿರುವ ಮೂರನೇ ಸಂಪೂರ್ಣ ಖಗ್ರಾಸ ಸೂರ್ಯಗ್ರಹಣ ಇದು. 2087ರಲ್ಲಿ ಮಾತ್ರ ಇನ್ನೊಮ್ಮೆ ಈ ವಿದ್ಯಮಾನ ಗೋಚರಿಸಲಿದೆ ಎಂದು ಖಗೋಳಶಾಸ್ತ್ರ ಕೇಂದ್ರವಾದ ಆಕಾಶಗಂಗಾದ ನಿರ್ದೇಶಕ ಹಾಗೂ ನೆಹರು ತಾರಾಲಯದ ಹಿರಿಯ ವಿಜ್ಞಾನಿ ಭರತ್ ಅಡೂರ್ ತಿಳಿಸಿದ್ದಾರೆ.ಸೂರ್ಯೋದಯದ ನಂತರ ದಕ್ಷಿಣ ಸೂರತ್‌ನಿಂದ ಜಪಾನ್‌ವರೆಗೆ ವಿವಿಧ ಪ್ರದೇಶಗಳಲ್ಲಿ ಗ್ರಹಣ ಗೋಚರಿಸಲಿದೆ. ಚೀನಾ, ಭೂತಾನ್, ಟಿಬೆಟ್ ಕೂಡ ಈ ಅಪೂರ್ವ ಘಟನೆಗೆ ಸಾಕ್ಷಿಯಾಗಲಿದೆ.ಸೂರತ್‌ನಲ್ಲಿ ಮೂರು ನಿಮಿಷಗಳವರೆಗೆ ಸಂಪೂರ್ಣ ಪ್ರಮಾಣದಲ್ಲಿ ಭೂಮಿ ಸೂರ್ಯರ ಮಧ್ಯೆ ಚಂದ್ರ ಬರಲಿದ್ದಾನೆ. ಬಿಹಾರದಲ್ಲಿ ನಾಲ್ಕು ನಿಮಿಷಗಳವರೆಗೆ, ಗುವಾ ದ್ವೀಪ ಸಮೂಹದ ಐವೋ-ಜಿಮಾದಲ್ಲಿ 6ನಿಮಿಷಗಳವರೆಗೆ ಗ್ರಹಣ ಸಂಭವಿಸಲಿದೆ.ದೇಶದಲ್ಲಿ ಸೂರತ್ ಮಾತ್ರವಲ್ಲದೇ, ಮಧ್ಯಪ್ರದೇಶ, ಛತ್ತೀಸ್‌ಗಡ, ಉತ್ತರಪ್ರದೇಶ, ಸಿಕ್ಕಿಂ, ಅಸ್ಸಾಂ ಹಾಗೂ ಮಹಾರಾಷ್ಟ್ರದ ಕೆಲವಡೆ ಸೂರ್ಯನನ್ನು ಚಂದ್ರ ಮರೆಮಾಚಲಿದ್ದಾನೆ.ಮುಂಬೈನಲ್ಲಿ ಶೇ.95ರಷ್ಟು ಪ್ರಮಾಣದಲ್ಲಿ ಗ್ರಹಣ ಗೋಚರವಾದರೆ, ನವದೆಹಲಿ, ಬೆಂಗಳೂರು, ಚೆನ್ನೈಗಳಲ್ಲಿ ಬಹುತೇಕ ಶೇ.80ರಷ್ಟು ಪ್ರಮಾಣದಲ್ಲಿ ಕಂಡು ಬರಲಿದೆ. ಆದರೆ ಗ್ರಹಣ ವೀಕ್ಷಣೆಗೆ ಮುಂಗಾರು ಮಾರುತದಿಂದ ಅಡಚಣೆಯಾಗುವ ಸಾಧ್ಯತೆ ಹೆಚ್ಚು. |