ಯಾವುದೇ ಪ್ರಲೋಭನೆಗೊಳಗಾಗದಿರಿ ಎಂಬುದಾಗಿ ನೂತನವಾಗಿ ಆಯ್ಕೆಯಾಗಿರುವ ಪಕ್ಷದ ಸಂದರಿಗೆ ಎಚ್ಚರಿಕೆಯ ಮಾತು ಹೇಳಿರುವ ಹಿರಿಯ ಬಿಜೆಪಿ ನಾಯಕ ಎಲ್.ಕೆ.ಆಡ್ವಾಣಿ, ನಡತೆಯಲ್ಲಿ ಪಾವಿತ್ರ್ಯತೆಯನ್ನು ಕಾಪಾಡಿಕೊಳ್ಳುವಂತೆ ಹೇಳಿದ್ದಾರೆ.
ಬಿಜೆಪಿ ಸಂಸದೀಯ ಪಕ್ಷದ ಸಭೆಯಲ್ಲಿ ಮಾತನಾಡಿದ ಅವರು ಮೊದಲ ಬಾರಿಗೆ ಆಯ್ಕೆಯಾಗಿರುವ 58 ಸಂಸದರು ತಮ್ಮ ನಡತೆಯಲ್ಲಿ ಪಾವಿತ್ರ್ಯತೆಯನ್ನು ಕಾಪಾಡಿಕೊಳ್ಳಿ ಎಂದು ಸಲಹೆ ಮಾಡಿದ್ದಾರೆ. ಇದಲ್ಲೆದೆ ಯಾವುದೇ ಆಮಿಷಕ್ಕೆ ಒಳಗಾಗುವುದರ ವಿರುದ್ಧವೂ ಎಚ್ಚರಿಸಿದ್ದಾರೆ.
ಸಭೆಯ ಬಳಿಕ ಮಾಧ್ಯಮಗಳಿಗೆ ಮಾಹಿತಿ ನೀಡಿದ ಲೋಕಸಭೆಯಲ್ಲಿ ಪಕ್ಷದ ಉಪನಾಯಕಿ ಸುಷ್ಮಾ ಸ್ವರಾಜ್ ಅವರು, ಚೊಚ್ಚಲ ಸಂಸದರು ಮಾಡುವ ತಪ್ಪುಗಳು, ಅವರನ್ನು ಹಾಗೂ ಪಕ್ಷವನ್ನು ಸಮಸ್ಯೆಗೆ ಸಿಲುಕಿಸುತ್ತದೆ ಎಂಬುದಾಗಿ ಹೇಳಿದರು.
"ಪಕ್ಷವು ಕೆಲವು ಸಿದ್ಧಾಂತಗಳನ್ನು ಅನುಸರಿಸುವ ಕಾರಣ ಇವುಗಳನ್ನು ಸಂಸದರು ಸಮಷ್ಠಿ ಭಾವದಿಂದ ಅನುಸರಿಸಬೇಕು ಎಂಬುದಾಗಿ ಅವರು ಹೇಳಿದರು" ಎಂಬುದಾಗಿ ಸುಷ್ಮಾ ಆಡ್ವಾಣಿ ಅವರನ್ನು ಉಲ್ಲೇಖಿಸಿ ನುಡಿದರು.
ಮೊದಲ ಬಾರಿಗೆ ಆಯ್ಕೆಯಾಗಿರುವ ಸಂಸದರಿಗಾಗಿ ಗುಣನಡತೆಯ ಕುರಿತು ಒಂದು ದಿನದ ತರಬೇತಿ ಕಾರ್ಯಕ್ರಮವನ್ನು ನಡೆಸಲಿದ್ದು, ಈ ವೇಳೆ ಇಂತಹ ಸಮಸ್ಯೆಗಳನ್ನು ಹೇಗೆ ತಪ್ಪಿಸಿಕೊಳ್ಳಬಹುದು ಎಂಬ ಕುರಿತ ಚೊಚ್ಚಲ ಸಂಸದರಿಗೆ ವಿವರಿಸಲಾಗುವುದು ಎಂದು ಅವರು ತಿಳಿಸಿದರು. |