ನಾನು ಕಾಂಗ್ರೆಸ್‌ಗೆ ಕಳೆದ ಹತ್ತುವರ್ಷಗಳ ಕಾಲ ಫ್ರೀಲಾನ್ಸರ್(ನೇಮಕವಾಗದೆ ಸ್ವತಂತ್ರವಾಗಿ ಕೆಲಸಮಾಡುವುದು) ಆಗಿದ್ದೆ ಎಂದು ಹೇಳುವ ಮೂಲಕ ಆರ್‌ಜೆಡಿ ನಾಯಕ ಲಾಲೂಪ್ರಸಾದ್ ಯಾದವ್ 'ಯುಪಿಎ ರೈಲಿನಲ್ಲಿ' ಸೀಟು ಸಿಗದಿರುವುದಕ್ಕೆ ತನ್ನ ತೀವ್ರ ಅಸಮಾಧಾನವನ್ನು ಕಾರಿಕೊಂಡಿದ್ದಾರೆ.
ರಾಷ್ಟ್ರಪತಿಗಳ ವಂದನಾ ನಿರ್ಣಯದ ಮೇಲೆ ಮಾತನಾಡುತ್ತಿದ್ದ ಅವರು, ಈ ಸಂದರ್ಭವನ್ನು ತನ್ನ ನೋವನ್ನು ಹೊರಹಾಕಲು ಬಳಸಿಕೊಂಡಿದ್ದು, ಅದು ಸಂಸತ್ ದಾಖಲೆಯಲ್ಲಿ ಸೇರಿಹೋಗಿದೆ. ಈ ಸಂದರ್ಭದಲ್ಲಿ ಅವರು, ತಾನು ಕಳೆದೊಂದು ದಶಕದಿಂದ ಕಾಂಗ್ರೆಸ್‌ನ ಫ್ರೀಲಾನ್ಸರ್ ಆಗಿದ್ದೆ ಎಂದು ವ್ಯಂಗ್ಯವಾಡಿದರು.
ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಉದ್ದೇಶಿಸಿ ಮಾತನಾಡಿದ ಅವರು "ಮೇಡಂ, ಈ ದೆಹಲಿ ಎಂಬ ನಗರವು ಒಂದು ಮಾಯಾನಗರಿ. ಇಲ್ಲಿ ಯಾರೂ ಶಾಶ್ವತರಲ್ಲ. ನಾನು ಸರ್ಕಾರದ ಅಂಗವಾಗಿದ್ದೆ, ಆದರೆ ಈಗ ನಾನು ಹೊರಗಿದ್ದೇನೆ" ಎಂದು ನುಡಿದರು.
ಹೊಗಳುಭಟರಿಗೆ ಟಿಟಿಎಂ(ತಬರ್ ತೋಡ್ ಮಾಲಿಸ್ ಕರ್ನೆವಾಲೆ) ಅಂದರೆ ಗಂಭೀರ ಆಹಂ ಮಾಲೀಸುಗಾರರು ಎಂಬ ಹೊಸದೊಂದು ಶಬ್ದಪ್ರಯೋಗ ಮಾಡಿದ ಅವರು, ಸೋನಿಯಾರ ಸಹಚರರು ತನ್ನನ್ನು ಅವಮಾನಿಸುತ್ತಿದ್ದಾರೆ ಎಂದು ದೂರಿದರು. ಅಲ್ಲದೆ, ನಿಮ್ಮ ಕಾರ್ಯಮುಗಿದ ಬಳಿಕ ನೀವು ನನ್ನನ್ನು ಗುರುತಿಸಲು ನಿರಾಕರಿಸುತ್ತೀರಿ ಎಂದು ದೂರಿದರು. ತನ್ನನ್ನು ಅವಮಾನಿಸಿರುವುದು ಸರಿಯಲ್ಲ ಎಂದು ಅವರು ಸೋನಿಯಾರನ್ನು ಈ ಸಂದರ್ಭದಲ್ಲಿ ಎಚ್ಚರಿಸಿದರು.
"ಸಂಪುಟ ವಿಸ್ತರಣೆಯ ಸಂದೇಶವು ಸರಿಯಲ್ಲ. ಮಾಜಿ ಮಿತ್ರರನ್ನು ಈ ರೀತಿ ಕೈಬಿಟ್ಟಿರುವುದು ಸೂಕ್ತವಲ್ಲ. ಇದು ಉತ್ತಮ ಸೂಚನೆಯನ್ನು ನೀಡುವುದಿಲ್ಲ" ಎಂದು ಅವರು ನುಡಿದರು.
ಆದರೆ, ಈ ವಿಚಾರದಲ್ಲಿ ಸೋನಿಯಾ ಗಾಂಧಿ ಹಾಗೂ ಪ್ರಧಾನಿ ಮನಮೋಹನ್ ಸಿಂಗ್ ಅವರದ್ದು ಯಾವುದೇ ತಪ್ಪಿಲ್ಲ ಎಂದ ಅವರು ನಿಮ್ಮ ಕೆಲವು ಸಹೋದ್ಯೋಗಿಗಳು ಈ ರೀತಿ ಮಾಡಿರುವುದು ಸರಿಯೇ ಎಂದು ಪ್ರಶ್ನಿಸಿದರು. ಲಾಲೂ ಪ್ರಸಾದ್ ತನ್ನ ಎಂದಿನ ಲಘುದಾಟಿಯಲ್ಲಿ ಹಾಸ್ಯಮಿಶ್ರಿತವಾಗಿ ಮಾತನಾಡಿದರಾದರೂ, ತನ್ನೊಳಗೆ ಹುದುಗಿದ್ದ ಕಾಂಗ್ರೆಸ್ ಮೇಲಿನ ಸಿಟ್ಟನ್ನು ಕಾರಿಕೊಂಡರು.
ಲಾಲೂ ಅವರ ಆರೋಪಗಳಿಗೆ ಪ್ರತಿಕ್ರಿಯಿಸಿದ ಕಾಂಗ್ರೆಸ್, ಲೋಕಸಭಾ ಚುನಾವಣೆಯ ಬಳಿಕದ ರಾಜಕೀಯ ನೈಜತೆಗಳಿಗೆ ಅನುಸಾರವಾಗಿ ಕಾಂಗ್ರೆಸ್ ತನ್ನ ನಿಲುವನ್ನು ಹೊಂದಿದೆ ಎಂದು ಹೇಳಿತು.
"ವೈಯಕ್ತಿಕವಾಗಿ ಲಾಲೂ ಮೇಲೆ ನಮಗೆ ಗೌರವವಿದೆ. ಬಿಹಾರದಲ್ಲಿ ಮೈತ್ರಿಯನ್ನು ಮುರಿದುಕೊಂಡದ್ದು ಕಾಂಗ್ರೆಸ್ ಅಲ್ಲ. ಅಲ್ಲಿ ಕಾಂಗ್ರೆಸ್‌ಗೆ ಕಡಿಮೆ ಸೀಟು ನೀಡಿರುವುದು ಎಲ್ಲಕ್ಕೂ ಮೂಲ" ಎಂಬುದಾಗಿ ಕಾಂಗ್ರೆಸ್ ವಕ್ತಾರ ಮನೀಶ್ ತಿವಾರಿ ಹೇಳಿದ್ದಾರೆ.
ರಾಜಕೀಯ ನಿರ್ಧಾರಗಳನ್ನು ಲೋಕಸಭಾ ಚುನಾವಣೆಗಳ ಬಳಿಕದ ರಾಜಕೀಯ ನೈಜತೆಗಳಿಗೆ ಅನುಗುಣವಾಗಿ ಕೈಗೊಳ್ಳಲಾಗಿದೆ ಎಂಬುದಾಗಿ ಲಾಲೂ ಅವರ ದೂರುಗಳಿಗೆ ತಿವಾರಿ ಪ್ರತಿಕ್ರಿಯಿಸಿದ್ದಾರೆ. |