ತಲೆಬರಹ ಓದಿ ಬೆಚ್ಚಿಬೀಳದಿರಿ. ಪಶ್ಚಿಮ ಬಂಗಾಳದ ಹೌರಾದ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಹೋಟೆಲ್ ಒಂದಕ್ಕೆ ಹೊಕ್ಕು ಕುಳಿತಾಗ, ಅಸ್ಥಿಪಂಜರವೊಂದು ನಿಮ್ಮೆದುರು ಬಂದು, ಏನು ಬೇಕು ಎಂದು ಕೇಳಿ, ಬೇಕಾದ್ದನ್ನು ತಂದುಕೊಡಲು ಮುಂದಾದರೆ, ಕಿರುಚಬೇಡಿ.ಸುಸ್ವಾಗತ ಎಂಬ ನಗುಭರಿತ ಮಾತಿನಿಂದ ಈ ದೆವ್ವಗಳೇ ನಿಮ್ಮಿಂದ ಆರ್ಡರ್ ತೆಗೆದುಕೊಳ್ಳುತ್ತವೆ. ಪಿಶಾಚಿಗಳೆಲ್ಲವೂ ಗೋಡೆಯಲ್ಲಿ ತೂಗುಹಾಕಲಾಗಿದ್ದ ಫ್ರೇಮ್‌ಗಳಿಂದ ಧುತ್ತನೆ ಚಿಮ್ಮಿ, ನಿಮ್ಮ ಬಳಿಯೇ ಕುಳಿತುಕೊಂಡಾಗ, ಎದೆ ಧಸಕ್ಕೆಂದರೂ ಜೋರಾಗಿ ಕೂಗಬೇಡಿ. ಇದು ವಿಶ್ವವಿಖ್ಯಾತ ಜಾದೂಗಾರ ಪಿ.ಸಿ.ಸರ್ಕಾರ್ (ಜೂನಿಯರ್) ನಿರ್ಮಿಸಲಿರುವ ದೆವ್ವಗಳ ರೆಸ್ಟೋರೆಂಟ್‌ನ ಚಿತ್ರಣ.ರಾಷ್ಟ್ರೀಯ ಹೆದ್ದಾರಿ 6ರ ನಿರ್ಮಾನುಷ ಪ್ರದೇಶದಲ್ಲಿ ನಿರ್ಮಾಣಗೊಳ್ಳುತ್ತಿರುವ ಈ ದೆವ್ವಗಳ ರೆಸ್ಟೋರೆಂಟ್, ಕೋಲ್ಕತಾದಿಂದ ಕೆಲವೇ ಕಿ.ಮೀ. ದೂರದಲ್ಲಿದ್ದು, ಮುಂದಿನ ನವೆಂಬರ್ ತಿಂಗಳ ವೇಳೆಗೆ ಆತಿಥ್ಯ ನೀಡಲು ಸಜ್ಜಾಗಲಿದೆ.ಕಾಂಪೌಂಡ್‌ನಲ್ಲಿ ಸ್ಮಶಾನಗಳು, ಗೋಡೆ ಮತ್ತು ಪುಟ್ಟ ಕಿಟಕಿಗಳಲ್ಲಿ ಭಯ ಬೀಳಿಸುವ ಚಿತ್ರಗಳಿಂದೊಡಗೂಡಿದ ಈ ಚಿತ್ರವಿಚಿತ್ರ ಉಪಾಹಾರಗೃಹಕ್ಕೆ, ಲೇಸರ್ ಲೈಟುಗಳು, ಚದುರಿದಂತಿರುವ ದೀಪಗಳು ಹಾಗೂ ಅನಿಮೇಟೆಡ್ ಮಾಡೆಲ್‌ಗಳು ಮತ್ತಷ್ಟು ಭಯಾನಕತೆ ನೀಡಲಿವೆ. ಇನ್ನೂ ಏನೇನಿರುತ್ತವೆ ಎಂಬುದನ್ನು ಸರ್ಕಾರ್ (ಜೂ) ಇನ್ನೂ ಪೂರ್ಣವಾಗಿ ಬಹಿರಂಗಗೊಳಿಸಬೇಕಷ್ಟೆ." ನೀವು ಕುಳಿತ ಟೇಬಲ್‌ಗೆ ಬಂದ ವೈಟರ್, ಆರ್ಡರ್ ತೆಗೆದುಕೊಳ್ಳುತ್ತಿರುವಂತೆಯೇ ತನ್ನದೇ ತಲೆಯನ್ನು ತೆಗೆದು, ಪ್ಲೇಟಿನ ಮೇಲಿಟ್ಟರೆ ಹೇಗಿರುತ್ತದೆ ಎಂದು ಯೋಚಿಸಿ ನೋಡಿ" ಎನ್ನುತ್ತಾ ಹೃದಯ ಬಡಿತ ಹೆಚ್ಚಿಸಿಬಿಟ್ಟಿದ್ದಾರೆ ಸರ್ಕಾರ್. ಸಮೀಪದ ಸ್ಮಶಾನದಿಂದ ಶವಭಕ್ಷಕ ಪಿಶಾಚಿಯೊಂದು ಧಿಗ್ಗನೇ ಮೇಲೆದ್ದುಬಂದು ನಿಮ್ಮ ಪಕ್ಕದಲ್ಲೇ ಕುಳಿತರೆ ಹೇಗಿರುತ್ತೀರಿ ಎಂದು ಮತ್ತಷ್ಟು ಬೆದರಿಸುತ್ತಾರೆ ಅವರು! ಮಾತ್ರವಲ್ಲ, ಗೋಡೆಯಲ್ಲಿ ತೂಗುಹಾಕಿದ ಚಿತ್ರವೊಂದರಿಂದ ದೆವ್ವವು ಚಿಮ್ಮುತ್ತಾ ಹೊರಬಂದು, 'ನಿಮ್ಮ ಹೆಸರೇನು' ಅಂತ ಕೇಳಿದ್ರೆ ನಿಮ್ಮ ಪರಿಸ್ಥಿತಿಯನ್ನೂ ಊಹಿಸಿಕೊಳ್ಳಬಹುದು!ಈ ಭಯಾನಕ ವಾತಾವರಣವು ತಡೆಯಲಾರದಷ್ಟು ವಿಪರೀತ ಅನ್ನಿಸಿದರೆ, ಪಕ್ಕದ ಬಾಗಿಲಲ್ಲೇ ಹೊರಗೆ ಹೋಗಲು ನನ್ನ ದೆವ್ವಗಳು ನಿಮಗೆ ಕರುಣೆಯಿಂದಲೇ ಅವಕಾಶ ಮಾಡಿಕೊಡುತ್ತವೆ. ಆದರೆ, ಕೊನೆಯವರೆಗೂ ಯಾರಾದರೂ ಒಳಗೆ ಕುಳಿತರೆಂದಾದಲ್ಲಿ, ಖಂಡಿತವಾಗಿಯೂ ಅವರು ಮೂಢನಂಬಿಕೆಗಳಿಂದ ಹೊರಬರುತ್ತಾರೆ. ಮ್ಯಾಜಿಕ್ ಎಂಬುದು ಕೇವಲ ವಿಜ್ಞಾನ ಹಾಗೂ ದೆವ್ವ-ಭೂತಗಳನ್ನೆಲ್ಲಾ ಮಾನವರೇ ಸೃಷ್ಟಿ ಮಾಡಿದ್ದು ಎಂಬುದನ್ನು ಅರಿತುಕೊಳ್ಳುತ್ತಾರೆ ಎಂದಿದ್ದಾರೆ ಪಿ.ಸಿ.ಸರ್ಕಾರ್ ಜೂನಿಯರ್.ಟೇಸ್ಟ್ ನೋಡಲು ಸಿದ್ಧರಾಗಿದ್ದೀರಾ? |