ರಾಷ್ಟ್ರಧ್ವಜಕ್ಕೆ ಅವಮಾನ ಮಾಡುತ್ತೀರಾ? ಮಾಡಿದರೂ, ಸ್ವಲ್ಪ ದಂಡ ಕ್ಟಟಿದರೆ ಮುಗೀತು ಎಂದು ಅಂದುಕೊಳ್ಳಬೇಡಿ. ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿದರೆ ಪ್ರಾಯಶ್ಚಿತವಾಗಿ ದಿನವೂ ಮನೆ ಮುಂದೆ ಧ್ವಜಾರೋಹಣ ಮಾಡಬೇಕಾದೀತು!ಇದು ತಮಾಷೆಯಲ್ಲ. ಮದ್ರಾಸು ಹೈಕೋರ್ಟ್ ಇಂತಹ ಒಂದು ಹೊಸ ತೀರ್ಪು ನೀಡಿದೆ. ಕಳೆದ ಎಪ್ರಿಲ್‌ನಲ್ಲಿ ತಮಿಳುನಾಡಿನ ಶ್ರೀಲಂಕಾ ವಿರುದ್ಧ ನೀತಿಯನ್ನು ಪ್ರತಿಭಟಿಸಿ ಕೊಯಂಬತ್ತೂರಿನಲ್ಲಿ ಎಂಟು ಮಂದಿ ಭಾರತದ ತ್ರಿವರ್ಣ ಧ್ವಜವನ್ನು ಸುಟ್ಟು ಹಾಕಲು ಪ್ರಯತ್ನಿಸಿದ್ದರು. ಈ ಆರೋಪದ ಹಿನ್ನೆಲೆಯಲ್ಲಿ ಆ ಎಂಟೂ ಮಂದಿ ಆರೋಪಿಗಳಿಗೆ ಒಂದು ವಾರ ಕಾಲ ಪ್ರತಿದಿನವೂ ತಮ್ಮ ಮನೆ ಮುಂದೆ ಭಕ್ತಿಯಿಂದ ಧ್ವಜಾರೋಹಣ ಮಾಡಬೇಕು ಎಂದು ತೀರ್ಪು ನೀಡಿದೆ.ಆರೋಪಿಗಳು ತಮ್ಮ ಮನೆಯ ಮುಂಭಾಗದಲ್ಲಿ ಒಂದು ವಾರ ಬೆಳಿಗ್ಗೆ ಆರು ಗಂಟೆಗೆ ತ್ರಿವರ್ಣ ಧ್ವಜವನ್ನು ಹಾರಿಸಿ, ಸಂಜೆ ಆರರ ವೇಳೆಗೆ ಅದನ್ನು ಇಳಿಸಬೇಕು. ಇದನ್ನು ಗಮನಿಸಲು ಕೊಯಂಬತ್ತೂರು ಪೋಲೀಸರು ಪ್ರತಿದಿನವೂ ತಪ್ಪದೆ ಅಲ್ಲಿ ಹಾಜರಿರಬೇಕು ಎಂದು ನ್ಯಾಯಮೂರ್ತಿ ಆರ್ .ರಘುಪತಿ ಆದೇಶ ನೀಡಿದರು.ಕೇವಲ ಧ್ವಜಾರೋಹಣ, ಅವರೋಹಣ ಮಾಡಿದರೆ ಸಾಲದು. ನ್ಯಾಯಮೂರ್ತಿಗಳು ಪ್ರತಿದಿನವೂ ಒಂದು ವಾರ ಕಾಲ ಈ ಎಂಟೂ ಆರೋಪಿಗಳು ತಾವು ಮಾಡಿದ ಪಾಪದ ಪ್ರಾಯಶ್ಚಿತಕ್ಕಾಗಿ ಅನಾಥಾಶ್ರಮಕ್ಕೆ ಭೇಟಿ ನೀಡಿ ಅಲ್ಲಿ ಕನಿಷ್ಟ ಮೂರು ಗಂಟೆ ಕಾಲ ಅಲ್ಲಿನ ಸೇವೆ ಮಾಡಬೇಕು ಎಂದೂ ಆದೇಶಿಸಿದ್ದಾರೆ.ಕಟ್ಟಾ ತಮಿಳು ಪರ ಸಂಘಟನೆಯ ಸದಸ್ಯರಾದ ಈ ಎಂಟು ಆರೋಪಿಗಳನ್ನು ಸದ್ಯ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ. ಜತೆಗೆ ಪ್ರತಿ ಆರೋಪಿಯೂ 10,000 ರೂಪಾಯಿಗಳೊಂದಿಗೆ ಮುಚ್ಚಳಿಕೆ ಪತ್ರವನ್ನೂ ಬರೆದುಕೊಡಲು ನ್ಯಾಯಮೂರ್ತಿಗಳು ತಿಳಿಸಿದರು. |