ರಾಜಕೀಯ ಒತ್ತಡಗಳು ಮತ್ತು ಪದೇಪದೇ ವರ್ಗಾವಣೆಯಿಂದ ಅಧಿಕಾರಿಗಳನ್ನು ರಕ್ಷಿಸುವ ನಿಟ್ಟಿನಲ್ಲಿ ಮಸೂದೆಯೊಂದನ್ನು ತರಲು ಸರ್ಕಾರ ಯೋಜಿಸಿದ್ದು, ಮುಂಬರುವ ಬಜೆಟ್ ಆಧಿವೇಶನದಲ್ಲಿ ಇದನ್ನು ಮಂಡಿಸುವ ನಿರೀಕ್ಷೆ ಇದೆ.
ಈ ಉದ್ದೇಶಿತ ನಾಗರಿಕ ಸೇವಾ ಮಸೂದೆಯು ಎಲ್ಲಾ ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳಿಗೆ ಮೂರು ವರ್ಷಗಳ ಅವಧಿಯನ್ನು ನಿಗದಿ ಪಡಿಸಿದೆ. ಹೊಸ ಕೇಂದ್ರೀಯ ಸಾರ್ವಜನಿಕ ಸೇವೆಗಳ ಪ್ರಾಧಿಕಾರವು ರಾಜಕೀಯ ಹಸ್ತಕ್ಷೇಪದ ಕುರಿತು ಕಾವಲುಗಾರನಾಗಿ ಕಾರ್ಯನಿರ್ವಹಿಸಲಿದೆ.
ಆದರೆ ಈ ಮಸೂದೆ ಅಂಗೀಕಾರವಾಗಲು ಸ್ವಲ್ಪ ಸಮಯ ಬೇಕಾಗುತ್ತದೆ. ಮಸೂದೆಯು ಕಾಯ್ದೆಯಾಗುವ ಮುನ್ನ ಅದನ್ನು ಸಂಸದೀಯ ಸ್ಥಾಯೀ ಸಮಿತಿಗೆ ಶಿಫಾರಸ್ಸು ಮಾಡಲಾಗುತ್ತದೆ. ಬಳಿಕ ಇದನ್ನು ಉಭಯ ಸದನಗಳಲ್ಲಿ ಮತಕ್ಕೆ ಹಾಕಲಾಗುತ್ತದೆ.
ಹಿರಿಯ ಅಧಿಕಾರಿಗಳ ಎಲ್ಲಾ ನೇಮಕಾತಿಗಳು, ವರ್ಗಾವಣೆಗಳು ಸಂಸತ್ತಿನ ಸೂಕ್ಷ್ಮ ಪರಿಶೀಲನೆಗೊಳಪಡಲಿದೆ. ಇದೇ ವೇಳೆ ಅಧಿಕಾರಿಗಳ ಕಾರ್ಯಕ್ಷಮತೆಯನ್ನು ಪರಿವೀಕ್ಷಿಸಲು ಸಾರ್ವಜನಿಕ ಸೇವಾ ಸಂಹಿತೆಯನ್ನು ಜಾರಿಗೆ ತರಲಿದೆ. |