ಸತ್ತ ವ್ಯಕ್ತಿ ಮತ್ತೆ ಬದುಕಿಬರುವುದು ಅಥವಾ ಸತ್ತನೆಂದು ತಿಳಿದ ವ್ಯಕ್ತಿ ಬದುಕಿ ಬಂದು ತನ್ನನ್ನು ಕೊಂದವರ ವಿರುದ್ಧ ಸೇಡುತೀರಿಸಿಕೊಳ್ಳುವುದು... ಇತ್ಯಾದಿಗಳೆಲ್ಲ ನಡೆಯೋದು ಕೇವಲ ಸಿನಿಮಾದಲ್ಲಿ. ಆದರೆ ಇಲ್ಲಿ ನಿಜಕ್ಕೂ ಅಂಥದ್ದೇ ಒಂದು ವಿಚಿತ್ರ ಘಟನೆ ನಡೆದಿದೆ.
ದೆಹಲಿಯ ಬಲ್ಲಾಬ್‌ಘಡ್ ಎಂಬಲ್ಲಿ 'ಸತ್ತುಹೋದ' ಹುಡುಗಿ ಮನೆಗೆ ಮರಳಿದ್ದಾಳೆ. ಅಷ್ಟೇ ಅಲ್ಲ, ಜತೆಗೆ ತನ್ನನ್ನು ಅಪಹರಿಸಿ ವೇಶ್ಯಾವೃತ್ತಿಗೆ ತಳ್ಳಲು ಪ್ರಯತ್ನಪಟ್ಟಿದ್ದ ವ್ಯಕ್ತಿ ವಿರುದ್ಧ ಸೇಡನ್ನೂ ತೀರಿಸಿಕೊಂಡಿದ್ದಾಳೆ. ಆಕೆಯ ಪ್ರತಿ ಮಾತಿನ ಸಾಕ್ಷಿಯನ್ನೂ ಸುಪ್ರೀಂಕೋರ್ಟ್ ಸ್ವೀಕರಿಸಿದ್ದು, ಆರೋಪಿಯನ್ನು ಅಪರಾಧಿಯೆಂದು ತೀರ್ಮಾನಿಸಿದೆ.
ನ್ಯಾಯಮೂರ್ತಿ ಎಂ.ಕೆ.ಶರ್ಮಾ ಹಾಗೂ ಬಿ.ಎಸ್.ಚೌಹಾನ್ ಅವರಿದ್ದ ನ್ಯಾಯಪೀಠ ಆರೋಪಿ ಫತೇ ಚಾಂದ್ ಅವರು ನೀಡಿದ ಎಲ್ಲಾ ತಾಂತ್ರಿಕ ಸಾಕ್ಷಿಗಳನ್ನು ತಿರಸ್ಕರಿಸಿದೆ. ಆರೋಪಿ ಚಾಂದ್ ಅವರು ತನ್ನ ವಿರುದ್ಧ ಎಫ್‌ಐಆರ್ ದಾಖಲಿಸಲು ತಡಮಾಡಿದ್ದು, ಹಾಗೂ ಆಕೆಯ ಮೈಮೇಲೆ ಅತ್ಯಾಚಾರದ ಯಾವುದೇ ಕುರುಹು ಇಲ್ಲದಿರುವುದನ್ನು ಬಲವಾಗಿ ಸಾಕ್ಷಿಯಾಗಿ ವಾದಿಸಿದ್ದರು.
ಆದರೆ, ಅಪಹೃತ ಹುಡುಗಿಯನ್ನು ಮಾದಕ ವಸ್ತು ನೀಡಿ ಆಕೆಯನ್ನು ಜೈಪುರಕ್ಕೆ ಅಪಹರಿಸಿದ್ದಲ್ಲದೇ ಆಕೆಯ ಮೇಲೆ ಮೇಲಿಂದ ಮೇಲೆ ಅತ್ಯಾಚಾರ ನಡೆಸಲಾಗಿದೆ. ಆಕೆಯನ್ನು ವೇಶ್ಯಾವೃತ್ತಿಗೆ ಒತ್ತಾಯಪಡಿಸುವ ಮೊದಲೇ ಅಂದರೆ, 23 ವರ್ಷಗಳ ಮೊದಲು ಈ ಸರಣಿ ಅತ್ಯಾಚಾರ ಆಕೆಯ ಮೇಲೆ ನಡೆದಿದೆ ಎಂದು ನ್ಯಾಯಪೀಠ ಹೇಳಿದೆ.
1986ರ ಜೂ.5ರಂದು ಅಪಹೃತ ಹುಡುಗಿಯ ಮೃತದೇಹ ಪತ್ತೆಯಾಗಿತ್ತು. ಆಕೆಯ ಹೆತ್ತವರು ಮೃತದೇಹವನ್ನು ತಮ್ಮ ಮಗಳದೆಂದೇ ಗುರುತಿಸಿದ್ದರು. ಹಾಗಾಗಿ ಆಕೆ ಸತ್ತಳೆಂದೇ ಭಾವಿಸಲಾಗಿತ್ತು. ಆದರೆ, ಒಂದುವರೆ ವರ್ಷಗಳ ನಂತರ ಹೇಗೋ ವೇಶ್ಯಾ ಮಾರಾಟ ದಂಧೆಯಿಂದ ತಪ್ಪಿಸಿಕೊಂಡು ಬಂದ ಹುಡುಗಿ ತನ್ನ ಮನೆಯಲ್ಲಿ ತನ್ನ ಕರಾಳ ದಿನಗಳ ಬಗ್ಗೆ ಹೇಳಿಕೊಂಡಿದ್ದಳು. ಪೊಲೀಸರು ಆಕೆಯ ದೂರನ್ನು ಸ್ವೀಕರಿಸಿದ್ದರು.
ವೈದ್ಯ ಪರೀಕ್ಷೆಗಳಿಂದ ಆಕೆ ಹಲವಾರು ಬಾರಿ ಲೈಂಗಿಕ ಸಂಪರ್ಕ ನಡೆಸಿದ್ದಾಳೆ ಎಂಬುದು ಸಹಜವಾಗಿಯೇ ದೃಢಪಟ್ಟಿತ್ತು. ಸಾಕ್ಷಿಯ ಆಧಾರದಲ್ಲಿ ಪಂಜಾಬ್ ಹಾಗೂ ಹರ್ಯಾಣ ಹೈಕೋರ್ಟ್ ಆರೋಪಿಗೆ ಏಳು ವರ್ಷಗಳ ಜೈಲು ಶಿಕ್ಷೆಯ ತೀರ್ಪನ್ನು ನೀಡಿತ್ತು. ಆದರೆ, ಆಕೆಯ ಮೇಲೆ ಅತ್ಯಾಚಾರ ನಡೆದುದಕ್ಕೆ ಕುರುಹುಗಳಿಲ್ಲ ಎಂಬುದನ್ನು ಒಪ್ಪಿತ್ತು.
ಈ ಹಿನ್ನೆಲೆಯಲ್ಲಿ ಮತ್ತೆ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದ ಈ ಪ್ರಕರಣದ ಹಿನ್ನೆಲೆಯಲ್ಲಿ ನ್ಯಾಯಪೀಠ, ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ ಎಂಬುದಕ್ಕೆ ಕುರುಹುಗಳಿಲ್ಲ ಎಂಬ ವಾದವನ್ನು ತಳ್ಳಿ ಹಾಕಿದೆ.
ಜತೆಗೆ, ಆಕೆಯನ್ನು ಒಂದುವರೆ ವರ್ಷಗಳ ನಂತರ ವೈದ್ಯ ಪರೀಕ್ಷೆ ನಡೆಸಲಾಗಿದೆ. ಆಕೆಯ ಮೇಲೆ ಅತ್ಯಾಚಾರ ನಡೆದಿತ್ತು. ಹಾಗೂ ನಂತರ ಆಕೆಯನ್ನು ವೇಶ್ಯಾವೃತ್ತಿಗೆ ತೊಡಗಿಸಲು ಒತ್ತಾಯಿಸಿ ಆಕೆಯ ಮೇಲೆ ಬಲಾತ್ಕಾರವಾಗಿದೆ. ಬಲಾತ್ಕಾರಕ್ಕೆ ಮಣಿದು ಆಕೆ ಸುಮಾರು ಒಂದುವರೆ ವರ್ಷ ಕಾಲ ವೇಶ್ಯಾವೃತ್ತಿ ನಡೆಸಿದ್ದಾಳೆ. ಹಾಗಾಗಿ ನಂತರ ಎಷ್ಟೋ ಲೈಂಗಿಕ ಸಂಪರ್ಕ ನಡೆದಿರುವುದರಿಂದ ಅತ್ಯಾಚಾರದ ಕುರುಹುಗಳು ಕಾಣಲು ವೈದ್ಯಕೀಯವಾಗಿ ಸಾಧ್ಯವಿಲ್ಲ. ಅಲ್ಲದೆ ಇಲ್ಲಿ ಅಂತಹ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದೂ ಸುಪ್ರೀಂಕೋರ್ಟ್ ಹೇಳಿದೆ.
ಜತೆಗೆ ಆರೋಪಿ ನೀಡಿದ ಇನ್ನೊಂದು ತಾಂತ್ರಿಕ ಸಾಕ್ಷಿ ಎಫ್‌ಐಆರ್ ದಾಖಲಿಸುವಲ್ಲಿ ವಿಳಂಬವಾಗಿತ್ತು ಎಂಬುದು. ಅದೂ ಕೂಡಾ ಆಕೆಯ ಹೆತ್ತವರಿಗೆ ಮಗಳ ಮೃತದೇಹ ಸಿಕ್ಕಿರುವುದರಿಂದ ಮಗಳು ಸತ್ತಳೆಂದೇ ಅವರು ತಿಳಿದಿದ್ದರು ಎಂದು ನ್ಯಾಯಪೀಠ ಹೇಳಿದೆ.
ಅಪಹೃತ ಹುಡುಗಿಯ ಹೇಳಿಕೆಗಳೆಲ್ಲವನ್ನು ಸ್ವೀಕರಿಸಿ ಅಂತಿಮವಾಗಿ ಹೇಳಿದ ನ್ಯಾಯಪೀಠ, ಆಕೆಯನ್ನು ಸಂಚಿನಿಂದ ಅಪಹರಿಸಲಾಗಿದೆ. ಜತೆಗೆ ಅಪಹರಣದ ನಂತರ ಆಕೆಯ ಮೇಲೆ ಬೆದರಿಕೆ, ದೈಹಿಕ ಹಿಂಸೆಗಳು ನಡೆದಿವೆ. ಅಂತಹ ಸದರ್ಭ ಆಕೆಯ ನೋವನ್ನು ಆಕೆ ಯಾರಿಗೂ ಹೇಳಿಕೊಳ್ಳಲಾರಳು. ಯಾಕೆಂದರೆ, ಅಲ್ಲಿರುವ ಯಾರೂ ಆಕೆಗೆ ಸಹಾಯ ಮಾಡಲು ಸಾಧ್ಯವಿಲ್ಲ ಎಂದು ಆಕೆಗೆ ಗೊತ್ತಿತ್ತು. ವೇಶ್ಯಾವಾಟಿಕೆಗೆ ಆಕೆಯ್ನನು ಒತ್ತಾಯಿಸಿರುವುದಲ್ಲದೆ, ಸರಣಿ ಅತ್ಯಾಚಾರ ಆಕೆಯ ಮೇಲೆ ನಡೆದಿದೆ. ಆದರೆ ಇದಕ್ಕೆಲ್ಲ ಸಾಕ್ಷ್ಯವನ್ನು ಬೇಡುವುದರಲ್ಲಿ ಅರ್ಥವಿಲ್ಲ ಎಂದು ಪೀಠ ಹುಡುಗಿಯ ನೋವಿಗೆ ದನಿಯಾಗಿದೆ. |