ರಾಷ್ಟ್ರಾದ್ಯಂತ ಖಾಲಿ ಬೀಳಲಿರುವ 14 ರಾಜ್ಯಪಾಲರ ಸ್ಥಾನಗಳನ್ನು ತುಂಬಲು ಪ್ರಧಾನಿ ಮನಮೋಹನ್ ಸಿಂಗ್ ಅವರು ಹೆಸರುಗಳ ಪಟ್ಟಿಮಾಡುತ್ತಿದ್ದಾರೆ ಎಂಬ ಸುದ್ದಿ ಹರಡುತ್ತಲೇ, ಜೀವನಪರ್ಯಂತ ನಿವೃತ್ತಿವೇತನವನ್ನು ನೀಡುವ ಹುದ್ದೆಯನ್ನು ಪಡೆಯಲು ಕಾಂಗ್ರೆಸ್‌ನ 'ನಿರುದ್ಯೋಗಿ' ನಾಯಕರು ಶತಾಯಗತಾಯ ಪ್ರಯತ್ನ ಆರಂಭಿಸಿದ್ದಾರೆ. ಇದೇ ವೇಳೆ, ಮೀರಾ ಕುಮಾರ್ ಅವರು ಸ್ಪೀಕರ್ ಆಗಿ ಆಯ್ಕೆಯಾಗಿರುವ ಕಾರಣ ಖಾಲಿಬಿದ್ದಿರುವ ಜಲಸಂಪನ್ಮೂಲ ಸಚಿವ ಸ್ಥಾನಕ್ಕೂ ಸ್ಫರ್ಧೆ ಏರ್ಪಟ್ಟಿದೆ.
ಸಂಪುಟ ದರ್ಜೆ ಮತ್ತು ಜಲಸಂಪನ್ಮೂಲ ಖಾತೆಯ ಮೇಲೆ ಕಣ್ಣಿಟ್ಟಿದ್ದ ಒರಿಸ್ಸಾ ಸಂಸದ ಶ್ರೀಕಾಂತ್ ಜೇನಾರಿಗೆ ರಾಸಾಯನಿಕ ಮತ್ತು ರಸಗೊಬ್ಬರ ಇಲಾಖೆಯ ರಾಜ್ಯಖಾತೆಯನ್ನು ನೀಡಲಾಗಿದ್ದು, ಅವರು ಬುಧವಾರ ಅಧಿಕಾರ ವಹಿಸಿಕೊಳ್ಳಲು ಮುಂದಾಗಿದ್ದಾರೆ. ತನಗೆ ಸಂಪುಟ ದರ್ಜೆ ಬೇಕೆಂದು ಅವರು ಅಧಿಕಾರ ವಹಿಸುವಿಕೆಯನ್ನು ಮುಂದೂಡಿದ್ದರು.
ಜನತಾದಳದಿಂದ ವಲಸೆ ಬಂದಿರುವ ಜೇನಾರಿಗೆ ಯಾಕೆ ಮಣೆ ಹಾಕಬೇಕು ಎಂದು ಒರಿಸ್ಸಾದ ಹಿರಿಯ ಸಂಸದರಾದ ಹೇಮಾನಂದ್ ಬಿಸ್ವಾಲ್ ಹಾಗೂ ಭಕ್ತಚಂದ್ರ ದಾಸ್ ಅವರು ಪ್ರಶ್ನಿಸುತ್ತಿದ್ದಾರೆ. ಬಿಸ್ವಾಲ್ ಅವರು ಮಾಜಿ ಮುಖ್ಯಮಂತ್ರಿಯಾಗಿದ್ದು, ದಾಸ್ ಮಾಜಿ ಕೇಂದ್ರ ಸಚಿವರಾಗಿರುವ ಕಾರಣ ಅವರ ವಾದದಲ್ಲಿ ಹುರುಳಿದೆ ಎಂದ ಮೂಲಗಳು ಹೇಳುತ್ತಿವೆ. ಬಿಸ್ವಾಲ್ ಬುಡಕಟ್ಟು ನಾಯಕನೂ ಆಗಿರುವ ಕಾರಣ ಇವರಿಗೆ ಸಿಟ್ಟುಬರಿಸುವುದು ಕಾಂಗ್ರೆಸ್‌ಗೆ ಇಷ್ಟವಿಲ್ಲ.
ಇತರ ರಾಜ್ಯಗಳೊಂದಿಗೆ ಜಲವಿವಾದ ಹೊಂದಿರದ ರಾಜ್ಯದ ಸಂಸದರನ್ನು ಜಲಸಂಪನ್ಮೂಲ ಸಚಿವರನ್ನಾಗಿಸಲು ಕಾಂಗ್ರೆಸ್ ಬಯಸಿದೆ. ಒಂದೆಡೆಯಿಂದ ಬಿಹಾರ ಮತ್ತು ಉತ್ತರ ಪ್ರದೇಶದ ಸಂಸದರು ತಮ್ಮ ರಾಜ್ಯಕ್ಕೆ ಸಾಕಷ್ಟು ಪ್ರಾತಿನಿಧ್ಯ ಸಿಕ್ಕಿಲ್ಲ ಎಂದು ದೂರುತ್ತಿದ್ದಾರೆ.
ಇದೇವೇಳೆ, ತ್ರಿಪುರ ಮತ್ತು ಪುದುಚೇರಿಯಲ್ಲಿ ಈಗಾಗಲೇ ರಾಜ್ಯಪಾಲರ ಹುದ್ದೆ ಖಾಲಿ ಬಿದ್ದಿದ್ದರೆ, ಈ ವರ್ಷದ ಅಂತ್ಯದ ವೇಳೆಗೆ ರಾಷ್ಟ್ರಾದ್ಯಂತ 12 ಹುದ್ದೆಗಳು ಖಾಲಿಯಾಗಲಿವೆ. ಇವೆಲ್ಲವುಗಳ ಭರ್ತಿಗೆ ಒಟ್ಟಿಗೆ ಕಾರ್ಯನಿರ್ವಹಿಸಲಾಗುತ್ತಿದೆ.
ಉತ್ತರಪ್ರದೇಶ, ಗುಜರಾತ್ ಹಾಗೂ ಮಹಾರಾಷ್ಟ್ರಗಳಂತ ಸೂಕ್ಷ್ಮ ರಾಜ್ಯಗಳಿಗೆ ಯಾರನ್ನು ಕಳುಹಿಸಬೇಕು ಎಂಬುದಾಗಿ ಸೋನಿಯಾಗಾಂಧಿ ಹಾಗೂ ಮನಮೋಹನ್ ಸಿಂಗ್ ಅವರು ಅಭ್ಯರ್ಥಿಗಳ ಆಯ್ಕೆ ಕಾರ್ಯಕ್ಕೆ ಮುಂದಾಗಿದ್ದಾರೆ.
ಶಿವರಾಜ್ ಪಾಟೀಲ್, ಅರ್ಜುನ್ ಸಿಂಗ್, ಎಚ್.ಆರ್. ಭಾರದ್ವಾಜ್ ಅವರನ್ನು ಈ ಹುದ್ದೆಗೆ ಕಳುಹಿಸಬಹುದು ಎಂಬುದಾಗಿ ಮೂಲಗಳು ಹೇಳುತ್ತಿವೆಯಾದರೂ, ಈ ಮೂವರು ರಾಜ್ಯಸಭಾ ಸದಸ್ಯರಾಗಿರುವ ಕಾರಣ ಮೇಲ್ಮನೆಯಲ್ಲಿನ ಸಮತೋಲನ ತಪ್ಪಿಸಿಕೊಳ್ಳಲು ಕಾಂಗ್ರೆಸ್ ಬಯಸುವುದಿಲ್ಲ.
ಮಾರ್ಗರೆಟ್ ಆಳ್ವ ಹಾಗೂ ಮೋತಿಲಾಲ್ ವೋರಾ ಅವರುಗಳೂ ರಾಜ್ಯಪಾಲರ ಹುದ್ದೆಯ ಸ್ಫರ್ಧೆಯಲ್ಲಿದ್ದಾರೆ ಎಂದು ಮೂಲಗಳು ಹೇಳಿವೆ. |