ಮುಂಬೈ ದಾಳಿಯ ಪ್ರಮುಖ ಆರೋಪಿ, ನರಹಂತಕ ಉಗ್ರ ಅಜ್ಮಲ್ ಅಮೀರ್ ಕಸಬ್‌ನನ್ನು ಬುಧವಾರ ವಿಶೇಷ ನ್ಯಾಯಾಲಯದಲ್ಲಿ ಹಾಜರುಪಡಿಸಿದ ವೇಳೆ ಹತ್ತರ ಹರೆಯದ ಬಾಲಕಿಯೊಬ್ಬಳು ಆತನನ್ನು ಗುರುತಿಸಿದಳು. ದಾಳಿ ನಡೆದ ದಿನ ಛತ್ರಪತಿ ಶಿವಾಜಿ ರೈಲು ನಿಲ್ದಾಣದಲ್ಲಿ ತನ್ನ ಮೇಲೆ ಈತನೆ ಗುಂಡೆಸೆದದ್ದು ಎಂಬುದಾಗಿ ಆಕೆ ಮ್ಯಾಜಿಸ್ಟ್ರೇಟ್ ಮುಂದೆ ಹೇಳಿದಳು.
ಕಸಬ್ ಹಾಗೂ ಆತನ ಸಹಚರ ಬಾಲಕಿಯತ್ತ ಅಮಾನುಷವಾಗಿ ಗುಂಡೆಸೆದಿದ್ದು, ಈ ವೇಳೆ ಬಾಲಕಿ ಗಾಯಗೊಂಡಿದ್ದಳು. ಇದೇ ವೇಳೆ ಇತರ ಹಲವಾರು ಮಂದಿ ಈ ಇಬ್ಬರು ಉಗ್ರರ ದಾಳಿಗೆ ಬಲಿಯಾಗಿದ್ದರು. ಈ ಬಾಲಕಿಯು ತನ್ನ ಗಾಯಗಳಿಂದ ಗುಣಹೊಂದಲು ಒಂದು ತಿಂಗಳ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರೂ, ಆಕೆಯ ಬಲಗಾಲು ಊನವಾಗಿದೆ. ಬಾಲಕಿ ಈಗ ತನ್ನ ಓಡಾಟಕ್ಕೆ ಆಧಾರಗೋಲುಗಳನ್ನು ಅವಲಂಭಿಸಬೇಕಾಗಿದೆ.
ದೇವಿಕ ರೊಟವಾನ್ ಎಂಬ ಈ ಬಾಲೆಯು ಪ್ರಕರಣದ ಅತ್ಯಂತ ಕಿರಿಯ ಪ್ರತ್ಯಕ್ಷ ಸಾಕ್ಷಿಯಾಗಿದ್ದಾಳೆ. ಆಕೆಯ ತಂದೆ ಅಸಿಸ್ಟೆಂಟ್ ಪೊಲೀಸ್ ಇನ್ಸ್‌ಪೆಕ್ಟರ್ ನಟವರಲಾಲ್ ಅವರೂ ಗುಂಡಿನ ದಾಳಿಯ ವೇಳೆ ಗಾಯಗೊಂಡಿದ್ದರು. ಅವರ ಹೇಳಿಕೆಯನ್ನೂ ನ್ಯಾಯಾಲಯದಲ್ಲಿ ದಾಖಲಿಸಲಾಗಿದೆ. ಕಸಬ್‌ನನ್ನು ಗುರುತಿಸಿದ ನಟವರಲಾಲ್ ನ್ಯಾಯಾಲದಲ್ಲಿ ಭಾವೋದ್ವೇಗಕ್ಕೆ ಒಳಗಾದರು. ತನ್ನ ಪುತ್ನಿಯ ಅಂಗಊನವಾಗುವಂತೆ ಮಾಡಿದ ಕಸಬ್‌ನನ್ನು ನೇಣಿಗೇರಿಸಬೇಕೆಂದು ಅವರು ನುಡಿದರು.
ಇತರ ಮೂವರೊಂದಿಗೆ ಕಟಕಟೆಯಲ್ಲಿ ನಿಂತಿದ್ದ ಕಸಬ್‌ನನ್ನು ದೇವಿಕಾ ಗುರುತಿಸಿದಳು. "ದೊಡ್ಡ ಸ್ಫೋಟ ಸಂಭವಿಸಿತು. ಈ ವೇಳೆ ನಾವಿಲ್ಲಿಂದ ತೆರಳಬೇಕು ಎಂದು ತಂದೆ ಹೇಳಿದ್ದು ಅವರು ನನ್ನನ್ನು ತೋಳಲ್ಲಿ ಎತ್ತಿ ಒಂದು ದಿಕ್ಕಿನಲ್ಲಿ ಓಡಲಾರಂಭಿಸಿದರು. ಈ ವೇಳೆ ನನ್ನ ಸಹೋದರ ಇನ್ನೊಂದು ದಿಕ್ಕಿನಲ್ಲಿ ಓಡಲಾರಂಭಿಸಿದ. ನಾವು ಹೊರಡುವ ವೇಳೆಗೆ ಇಬ್ಬರು ವ್ಯಕ್ತಿಗಳು ಗುಂಡುಹಾರಿಸುತ್ತಿದ್ದನ್ನು ನಾನು ನೋಡಿದೆ. ನನ್ನ ಮೇಲೂ ಗುಂಡು ಹಾರಿಸಿದ್ದು, ನನ್ನ ಬಲಕಾಲಿಗೆ ಗುಂಡು ತಗುಲಿ ಕಾಲು ಮುರಿದು ರಕ್ತ ಚಿಮ್ಮಿತು" ಎಂದು ದೇವಿಕಾ ನ್ಯಾಯಾಲಯದ ಮುಂದೆ ಸಾಕ್ಷಿನುಡಿದಳು. |