ಕೇಂದ್ರ ಸಚಿವರೊಬ್ಬರು ನಡೆಸುತ್ತಿರುವ ಕಾಲೇಜು ಸೇರಿದಂತೆ ತಮಿಳ್ನಾಡಿನ ಕೆಲವು ವೈದ್ಯಕೀಯ ಕಾಲೇಜುಗಳಲ್ಲಿ ದೊಡ್ಡ ಮೊತ್ತದ ಡೊನೇಶನ್ ವಸೂಲಿ ಮಾಡಲಾಗುತ್ತಿದೆ ಎಂಬ ಆಪಾದನೆಗಳ ಕುರಿತು ತನಿಖೆ ನಡೆಸಲು ಭಾರತೀಯ ವೈದ್ಯಕೀಯ ಮಂಡಳಿಯು ತನಿಖಾ ತಂಡವನ್ನು ಕಳುಹಿಸಲಿದೆ. ಈ ನಿರ್ಧಾರವನ್ನು ಮಂಗಳವಾರದ ಸಭೆಯಲ್ಲಿ ಕೈಗೊಳ್ಳಲಾಗಿದೆ.
"ಆರೋಪಗಳ ಬಗ್ಗೆ ತನಿಖೆ ನಡೆಸಲು ಚೆನ್ನೈಗೆ ತನಿಖಾ ತಂಡಗಳನ್ನು ಕಳುಹಿಸಲು ನಾವು ನಿರ್ಧರಿಸಿದ್ದೇವೆ" ಎಂದು ಮಂಡಳಿಯ ಅಧ್ಯಕ್ಷ ಕೇತನ್ ದೇಸಾಯ್ ಹೇಳಿದ್ದಾರೆ.
ಡೊನೇಶನ್ ಹಾವಳಿಯ ಆರೋಪ ಹೊತ್ತ ಕಾಲೇಜೊಂದರಲ್ಲಿ ಕೇತನ್ ಅವರು ಮಂಡಳಿಯ ಸದಸ್ಯರಾಗಿರುವುದರ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ತಾನು ವಿಶ್ವವಿದ್ಯಾನಿಲಯದ ಅನುದಾನ ಆಯೋಗದಿಂದ ನೇಮಕಗೊಂಡಿರುವ ಕಾರಣ ಇದರಿಂದ ನೇರ ಸಂಘರ್ಷ ಉಂಟಾಗದು ಎಂದು ಅವರು ಹೇಳಿದ್ದಾರೆ.
ಖಾಸಗಿ ವಾಹಿನಿಯೊಂದು ನಡೆಸಿದ ಕುಟುಕು ಕಾರ್ಯಾಚರಣೆಯೊಂದರಲ್ಲಿ ಶ್ರೀ ಬಾಲಾಜಿ ಮೆಡಿಕಲ್ ಕಾಲೇಜು ಮತ್ತು ಶ್ರೀ ರಾಮಚಂದ್ರ ವಿಶ್ವವಿದ್ಯಾನಿಲಯದ ಅಧಿಕಾರಿಗಳು ವಿದ್ಯಾರ್ಥಿಗಳ ಪ್ರವೇಶಕ್ಕೆ 12ರಿಂದ 20 ಲಕ್ಷಗಳಷ್ಟು ದೊಡ್ಡಮೊತ್ತದ ಬೇಡಿಕೆ ಇಟ್ಟಿರುವುದನ್ನು ತೋರಿಸಿತ್ತು.
ಬಾಲಾಜಿ ವೈದ್ಯಕೀಯ ಕಾಲೇಜು ಕೇಂದ್ರ ಸಚಿವ ಎಸ್. ಜಗತ್‌ರಕ್ಷಕನ್ ಅವರಿಗೆ ಸೇರಿದ್ದಾಗಿದೆ ಎಂದು ಹೇಳಲಾಗಿದೆ. ಆದರೆ ಸಚಿವರು ಇದನ್ನು ನಿರಾಕರಿಸಿದ್ದಾರೆ.
ಈ ಹಗರಣವು ಬೆಳಕಿಗೆ ಬಂದ ಬಳಿಕ ಮಾನವ ಹಕ್ಕುಗಳ ಸಚಿವಾಲಯವು ಎರಡೂ ಸಂಸ್ಥೆಗಳಿಗೂ ನೋಟೀಸು ಕಳುಹಿಸಿದ್ದು, ಈ ಕುರಿತು ವಿವರಣೆ ಕೇಳಿದೆ.
ಇದಲ್ಲದೆ, ಕ್ಯಾಪಿಟೇಶನ್ ಹಗರಣದ ಕುರಿತು ತನಿಖೆ ನಡೆಸಲು ಯುಜಿಸಿಯೂ ಸಮಿತಿಯನ್ನು ನೇಮಕ ಮಾಡಿದೆ. |