ಅಮೆರಿಕದ ವಿದೇಶಾಂಗ ನೀತಿಯಲ್ಲಿ ಭಾರತವು ಪ್ರಧಾನ ಆದ್ಯತೆಯಾಗಿದೆ ಎಂಬುದಾಗಿ ಅಮೆರಿಕದ ವಿದೇಶಾಂಗ ಇಲಾಖೆಯ ಆಧೀನ ಕಾರ್ಯದರ್ಶಿ ವಿಲಿಯಂ ಬರ್ನ್ಸ್ ಹೇಳಿದ್ದಾರೆ. ಅವರು ನಾಲ್ಕುದಿನಗಳ ಭೇಟಿಗಾಗಿ ಭಾರತಕ್ಕೆ ಆಗಮಿಸಿದ್ದಾರೆ.
21ನೆ ಶತಮಾನದಲ್ಲಿ ಭಾರತವು ಅಮೆರಿಕದ ನಿರ್ಣಾಯಕ ಜಾಗತಿಕ ಪಾಲುದಾರನಾಗಲಿದೆ ಎಂದು ಅವರು ನುಡಿದರು.
ವಿದೇಶಾಂಗ ಕಾರ್ಯದರ್ಶಿ ಶಿವಶಂಕರ್ ಮೆನನ್ ಅವರೊಂದಿಗೆ ಮಾತುಕತೆ ನಡೆಸಿದ ಬಳಿಕ ಬರ್ನ್ಸ್ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು. ಮಾತುಕತೆಯ ವೇಳೆಗೆ, ಮುಂಬೈ ನರಮೇಧದ ರೂವಾರಿಗಳ ವಿರುದ್ಧ ಪಾಕಿಸ್ತಾನದ ನಿಷ್ಕ್ರೀಯತೆಯ ಕುರಿತು ಭಾರತದ ಭ್ರಮನಿರಸನವನ್ನು ಮೆನನ್ ತಿಳಿಸಿದ್ದಾರೆನ್ನಲಾಗಿದೆ.
ಪಾಕಿಸ್ತಾನದೊಂದಿಗೆ ಮಾತುಕತೆ ನಡೆಸಲು ಭಾರತಕ್ಕೆ ಜಿಗುಪ್ಸೆ ಏನಿಲ್ಲ. ಆದರೆ ಮಾತುಕತೆ ಮುಂದುವರಿಕೆಗೆ ಇಸ್ಲಾಮಾಬಾದ್ ಯೋಗ್ಯವಾದ ವಾತಾವರಣವನ್ನು ನಿರ್ಮಿಸಬೇಕಾಗಿದೆ ಎಂಬುದಾಗಿ ಮೆನನ್ ಹೇಳಿದ್ದಾರೆನ್ನಲಾಗಿದೆ. ಪಾಕಿಸ್ತಾನದ ನೆಲದಿಂದ ಭಾರತದ ವಿರುದ್ಧ ಭಯೋತ್ಪಾದನಾ ದಾಳಿ ನಡೆಸಲಾಗುತ್ತಿದ್ದು, ಹಿಂಸಾಚಾರದ ವಾತಾವರಣದಲ್ಲಿ ಮಾತುಕತೆ ಸಾಧ್ಯವಿಲ್ಲ ಎಂಬ ನಿಲುವನ್ನು ಮೆನನ್ ವ್ಯಕ್ತಪಡಿಸಿದ್ದಾರೆ.
ಅಲ್ಲದೆ ಜಮಾತ್ ಉದ್ ದಾವ ಸಂಸ್ಥಾಪಕ ಹಫೀಜ್ ಸಯೀದ್‌ನನ್ನು ಬಿಡುಗಡೆ ಮಾಡಿರುವ ಕುರಿತೂ ವಿದೇಶಾಂಗ ಕಾರ್ಯದರ್ಶಿ ಅಸಮಾಧಾನ ಸೂಚಿಸಿದ್ದಾರೆ.
ಬರ್ನ್ಸ್ ಅವರು ವಿದೇಶಾಂಗ ವ್ಯವಹಾರಗಳ ಸಚಿವ ಎಸ್ಸೆಂ ಕೃಷ್ಣ ಹಾಗೂ ಗೃಹಸಚಿವ ಪಿ.ಚಿದಂಬರಂ ಅವರನ್ನು ಭೇಟಿಯಾಗಲಿದ್ದಾರೆ. |