ಇತ್ತೀಚೆಗೆ ಅಂತ್ಯಗೊಂಡಿರುವ ಲೋಕಸಭಾ ಚುನಾವಣೆಯಲ್ಲಿ ಸೋಲುಂಡಿರುವ ಬಿಜೆಪಿ ಪಕ್ಷದೊಳಗೆ ಮೂಡಿರುವ ಬಿರುಕು ದಿನೇದಿನೇ ಆಳಗೊಳ್ಳುತ್ತಿದೆ. ಪಕ್ಷವನ್ನು ಹೇಗೆ ನಡೆಸಲಾಗುತ್ತದೆ ಮತ್ತು ಕಾರ್ಯಕ್ಷಮತೆಯ ಪರಾಮರ್ಷೆಯನ್ನೂ ರಹಸ್ಯವಾಗಿ ಮಾಡಲಾಗುತ್ತಿದೆ ಎಂಬುದಾಗಿ ಹಿರಿಯ ನಾಯಕರು ಪಕ್ಷದ ನಾಯಕತ್ವವನ್ನು ಪ್ರಶ್ನಿಸುತ್ತಿದ್ದಾರೆ.
ಪಕ್ಷದ ಹಿರಿಯ ನಾಯಕ ಎಲ್.ಕೆ. ಆಡ್ವಾಣಿ ಅವರ ನಿವಾಸದಲ್ಲಿ ನಡೆಸಲಾಗಿರುವ ಪಕ್ಷದ ಪ್ರಮುಖ ನಾಯಕರು ನಡೆಸಲಾಗಿರುವ ಸಭೆಯಲ್ಲಿ ಹಲವಾರು ವಿಚಾರಗಳನ್ನು ಎತ್ತಲಾಗಿದೆ. ಇವುಗಳಲ್ಲಿ ನಿರ್ಧಾರಗ ಕೈಗೊಳ್ಳುವ ವಿಧಾನ, ನಾಯಕರೊಳಗೆ ಸಮನ್ವಯತೆಯ ಕೊರತೆ ಹಾಗೂ ಕಾರ್ಯಕ್ಷಮತೆ ಮತ್ತು ಪ್ರತಿಫಲಗಳ ನಡುವಿನ ಸಂಬಂಧ ಮುಂತಾದ ವಿಚಾರಗಳು ಸೇರಿದ್ದವು.
ಚುನಾವಣಾ ಕಾರ್ಯ ತಂತ್ರವನ್ನು ರೂಪಿಸಿದವರಿಗೆ, ಪಕ್ಷವು ಸೋತಬಳಿಕವೂ ನೀಡಿರುವ ಪ್ರತಿಫಲದ ಕುರಿತು ಹಿರಿಯ ನಾಯಕರಾದ ಜಸ್ವಂತ್ ಸಿಂಗ್ ಪ್ರಶ್ನಿಸಿದ್ದಾರೆ ಎಂದು ಹೇಳಲಾಗಿದೆ. ಅರುಣ್ ಜೇಟ್ಲಿ ಅವರನ್ನು ರಾಜ್ಯಸಭೆಯಲ್ಲಿ ವಿರೋಧಪಕ್ಷದ ನಾಯಕನನ್ನಾಗಿ ಆಯ್ಕೆಮಾಡಿರುವುದಕ್ಕೆ ಜಸ್ವಂತ್ ಈ ಪ್ರಶ್ನೆ ಎತ್ತಿದ್ದಾರೆ. ಚುನಾವಣೆ ವೇಳೆ ಜೇಟ್ಲಿ ಮುಖ್ಯ ವ್ಯೂಹಗಾರರಾಗಿದ್ದರೆ, ಆಡ್ವಾಣಿಯವರ ಆಪ್ತ ಸುಧೀಂದ್ರ ಕುಲಕರ್ಣಿ ಅವರನ್ನು ಪ್ರಚಾರ ಸಮಿತಿಯ ಸದಸ್ಯನನ್ನಾಗಿಸಲಾಗಿತ್ತು.
ಅಲ್ಲದೆ. ಈ ಇಬ್ಬರು ಪತ್ರಿಕೆಗಳಿಗೆ ಲೇಖನಗಳನ್ನು ಬರೆಯುವ ಮೂಲಕ ಚುನಾವಣಾ ಸೋಲಿಗೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿರವುದಕ್ಕೂ ಈ ಇಬ್ಬರ ವಿರುದ್ಧ ಕೆಂಡ ಕಾರಲಾಗಿದೆ.
ಮಂಗಳವಾರದ ಬಿಜೆಪಿ ಸಂಸದೀಯ ಪಕ್ಷದ ಸಭೆಯಲ್ಲೂ ಭಿನ್ನಮತ ಸ್ಫೋಟಗೊಂಡಿದ್ದು, ಈ ವೇಳೆ ಪಕ್ಷದ ಇನ್ನೊಬ್ಬ ಹಿರಿಯ ನಾಯಕ ಅರುಣ್ ಶೌರಿ ಪಕ್ಷಾಧ್ಯಕ್ಷ ರಾಜ್‌ನಾಥ್ ಸಿಂಗ್ ವಿರುದ್ಧ ಟೀಕೆ ಮಾಡಿದ್ದರು ಎನ್ನಲಾಗಿದೆ. |