ಮುಂಬೈ ನರಮೇಧದ ನರಹಂತಕ, ಪಾಕಿಸ್ತಾನಿ ಉಗ್ರ ಅಜ್ಮಲ್ ಅಮೀರ್ ಕಸಬ್‌ನಿಗೆ ಜೈಲು ಅಧಿಕಾರಿಗಳೊಂದಿಗೆ ಸರಿಯಾಗಿ ವರ್ತಿಸುವಂತೆ ತಾಕೀತು ಮಾಡಿರುವ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ತಹಲಿಯಾನಿ ಅವರು ಇಲ್ಲವಾದರೆ ಕಠಿಣ ಕ್ರಮವನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಮುಂಬೈದಾಳಿಯ ಪ್ರಮುಖ ಆರೋಪಿ ಕಸಬ್ ನ್ಯಾಯಾಲಯಕ್ಕೆ ಬಂದ ತಕ್ಷಣ, ನ್ಯಾಯಾಧೀಶರು ಆತನ ವರ್ತನೆಗೆ ಸಿಟ್ಟುಗೊಂಡಿದ್ದರು. ಜೈಲು ಅಧಿಕಾರಿಗಳೊಂದಿಗೆ ಅನುಚಿತವಾಗಿ ವರ್ತಿಸಲು ಕಾರಣವೇನು ಎಂದು ಆತನನ್ನು ಪ್ರಶ್ನಿಸಿದರು. ಉತ್ತರಿಸಿದ ಕಸಬ್, ಸರ್ಚ್ ವೇಳೆಗೆ ಅವರು ತುಂಬ ಒರಟಾಗಿ ನಡಕೊಂಡರು, ಇದರಿಂದಾಗಿ ತಾನು ಕೋಪಗೊಂಡೆ ಎಂದು ಹಿಂದಿಯಲ್ಲಿ ಉತ್ತರಿಸಿದ.
"ನಾನು ಜೈಲು ಅಧಿಕಾರಿಗಳೊಂದಿಗೆ ಮಾತನಾಡುತ್ತೇನೆ. ಅದರೆ ಇನ್ನು ಮುಂದೆ ಯಾವುದೇ ದೂರುಗಳು ಬರಬಾರದು" ಎಂಬುದಾಗಿ ಕಸಬ್‌ನನ್ನು ಕಟಕಟೆಯಲ್ಲಿ ಕುಳಿತುಕೊಳ್ಳಲು ಹೇಳುತ್ತಾ ನ್ಯಾಯಾಧೀಶರು ಎಚ್ಚರಿಸಿದರು. ಅಲ್ಲದೆ, ಜೈಲಿನಲ್ಲಿ ದುರ್ವರ್ತನೆ ತೋರುವುದು ಸರಿಯಲ್ಲ ಎಂದು ಅವರು ಉಗ್ರನಿಗೆ ತಾಕೀತು ಮಾಡಿದರು.
"ಆತನ ದುರ್ವತನೆಯ ಕುರಿತು ದೂರುಗಳು ಬರುತ್ತಿವೆ. ಇದು ತೊಂದರೆ ಮಾಡುತ್ತದೆ. ಆತ ಹೇಳಿರುವ ವಿಚಾರವನ್ನು ತಾನು ಪರಿಶೀಲಿಸುತ್ತೇನೆ. ಆದರೆ ಇದು ಮತ್ತೊಮ್ಮೆ ಪುನರಾವರ್ತನೆಯಾಗಬಾರದು" ಎಂಬುದಾಗಿ ಇದೇ ವೇಳೆ ನ್ಯಾಯಾಧೀಶರು ಕಸಬ್‌ನ ವಕೀಲ ಅಬ್ಬಾಸ್ ಕಾಜ್ಮಿ ಅವರಿಗೆ ಹೇಳಿದರು.
"ತಾನು ಕಸಬ್‌ನೊಂದಿಗೆ ಮಾತನಾಡುತ್ತೇನೆ ಮತ್ತು ಭವಿಷ್ಯದಲ್ಲಿ ಆತ ಸರಿಯಾಗಿ ವರ್ತಿಸುವಂತೆ ಹೇಳುತ್ತೇನೆ" ಎಂಬುದಾಗಿ ಖಾಜ್ಮಿ ಭರವಸೆ ನೀಡಿದರು.
ಮಂಗಳವಾರ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿರುವ ವೇಳೆಗೆ ತನಗೆ ನಮಾಜ್‌ಗೆ ತಡವಾಗುತ್ತದೆ ಎಂದು ಕಸಬ್ ಪೊಲೀಸರ ವಿರುದ್ಧ ಸಿಡಿಮಿಡಿಗೊಂಡಿದ್ದ. ಇದನ್ನು ಕಂಡ ನ್ಯಾಯಾಧೀಶರು, ಕಟಕಟೆಯಲ್ಲಿ ಸುಮ್ಮನೆ ಕುಳಿತು ಕಲಾಪವನ್ನು ಆಲಿಸುವಂತೆ ಹೇಳಿದ್ದರು. |