ಹುಡುಗಿಯರನ್ನು ಚುಡಾಯಿಸುವುದರಿಂದ ತಪ್ಪಿಸಲು ಕಾನ್ಪುರದ ಹಲವು ಪದವಿ ಕಾಲೇಜಿಗಳಲ್ಲಿ ಈಗ ಹುಡುಗಿಯರು ಜೀನ್ಸ್, ಬಿಗಿಯಾದ ಶರ್ಟ್, ಟಾಪ್‌ಗಳು, ತೋಳಿಲ್ಲದ ಶರ್ಟ್, ಎತ್ತರ ಹಿಮ್ಮಡಿಯ ಚಪ್ಪಲಿ, ಬಿಗಿಯಾದ ಉಡುಪುಗಳನ್ನು ಧರಿಸಬಾರದು ಎಂದು ಕಟ್ಟಪ್ಪಣೆ ಹೊರಡಿಸಲಾಗಿದೆ.ಆಚಾರ್ಯ ನರೇಂದ್ರ ಕಾಲೇಜು, ದಯಾನಂದ ಮಹಿಳಾ ಪದವಿ ಕಾಲೇಜು, ಸೇನ್ ಬಾಲಿಕಾ ಕಾಲೇಜು ಹಾಗೂ ಜೋಹರಿ ದೇವಿ ಪದವಿ ಕಾಲೇಜುಗಳಲ್ಲಿ ಈ ಹೊಸ ನಿಯಮ ಜಾರಿಗೊಳಿಸಲಾಗಿದೆ.ಟಿಶರ್ಟ್, ಜೀನ್ಸ್, ಸ್ಲೀವ್‌ಲೆಸ್ ಟಾಪ್, ಬಿಗಿಯಾದ ಉಡುಪುಗಳನ್ನು ಧರಿಸುವ ಹುಡುಗಿಯರೇ ಹೆಚ್ಚು ಹುಡುಗರಿಂದ ಚುಡಾಯಿಸಿಕೊಂಡ ಹಾಗೂ ಕಿರುಕುಳ ಉಂಟಾದ ಬಗ್ಗೆ ದೂರು ನೀಡುವುದನ್ನು ಗಮನಿಸಿರುವುದರಿಂದ ಮುಂಜಾಗ್ರತಾ ಕ್ರಮವಾಗಿ ಈ ನಿಯಮ ತರಲಾಗಿದೆ ಎಂದು ದಯಾನಂದ ಮಹಿಳಾ ಕಾಲೇಜಿನ ಪ್ರಾಂಶುಪಾಲರಾದ ಮೀಟಾ ಜಮಾಲ್ ಹೇಳುತ್ತಾರೆ.ಜತೆಗೆ, ಕಾಲೇಜು ಕ್ಯಾಂಪಸ್‌ನಲ್ಲಿ ಮೊಬೈಲ್ ಫೋನ್‌ಗಳ ಬಳಕೆಯನ್ನೂ ಕಡಿಮೆ ಮಾಡಲು ವಿದ್ಯಾರ್ಥಿಗಳಿಗೆ ನಿರ್ದೇಶಿಸಲಾಗಿದೆ. ತುರ್ತು ಸಂದರ್ಭಗಳಲ್ಲಿ ಮಾತ್ರ ಕಾಲೇಜು ಉಪನ್ಯಾಸಕರ ಅನುಮತಿ ಪಡೆದು ಮೊಬೈಲ್ ಬಳಸಬೇಕೆಂದು ನಿಯಮ ರೂಪಿಸಲಾಗಿದೆ. ಕಿರುಕುಳ ನೀಡಿದ್ದು ಕಂಡುಬಂದವರಿಗೆ ನೂರು ರೂಪಾಯಿಗಳ ದಂಡವನ್ನೂ ಹಾಕಲಾಗುತ್ತಿದೆ ಎಂದು ಮೀಟಾ ವಿವರಿಸಿದರು.ವಿದ್ಯಾರ್ಥಿನಿಯರಿಗೆ ಸುರಕ್ಷಿತ ವಾತಾವರಣ ಕಲ್ಪಿಸುವುದು ಪಾಲಕ ಪೋಷಕರ ಜವಾಬ್ದಾರಿಯಷ್ಟೇ ಅಲ್ಲದೆ, ಕಾಲೇಜಿನ ಜವಾಬ್ದಾರಿಯೂ ಇದೆ. ಹಾಗಾಗಿ ಈ ನಿಯಮ ಜಾರಿಗೊಳಿಸಲೇಬೇಕಾಯಿತು ಎನ್ನುತ್ತಾರೆ ಆಚಾರ್ಯ ಕಾಲೇಜಿನ ಪ್ರಾಂಶುಪಾಲರಾದ ಉಮಾಕಾಂತಿ ತಿವಾರಿ.ಈ ನಿಯಮಕ್ಕೆ ವಿದ್ಯಾರ್ಥಿಗಳಿಂದ ಮಿಶ್ರ ಪ್ರತಿಕ್ರಿಯೆ ಬಂದಿದೆ. ದಯಾನಂದ ಕಾಲೇಜಿನ ವಿದ್ಯಾರ್ಥಿನಿ ಶೇಫಾಲಿ ಗುಪ್ತಾ ಹೇಳುವಂತೆ, ಕಾಲೇಜು ಫ್ಯಾಷನ್ ಪೆರೇಡ್ ಅಂತೂ ಖಂಡಿತ ಅಲ್ಲ. ಇದು ಓದುವ ತಾಣ. ಅದಕ್ಕಾಗಿ ಇಂತಹ ನಿಯಮಗಳು ಒಳ್ಳೆಯ ಬೆಳವಣಿಗೆ ಎನ್ನುತ್ತಾರೆ.ರಜಿಯಾ ಅಕ್ತರ್ ಹೇಳುವಂತೆ, ಕಾಲೇಜಿನಲ್ಲಿ ಮೊಬೈಲ್ ಫೋನ್ ಅಗತ್ಯವೇ ಇಲ್ಲ. ಪೋಷಕರಿಗೆ ನಮ್ಮ ಕಾಲೇಜು ಸಮಯದ ಬಗ್ಗೆ ಸರಿಯಾದ ಅರಿವಿದೆ. ಅದ್ಕಕಾಗಿ ಮೊಬೈಲ್ ಅಗತ್ಯ ನನಗೆ ಕಾಣುವುದಿಲ್ಲ ಎನ್ನುತ್ತಾರೆ. ಜತೆಗೆ ಇಂಥದ್ದೇ ನಿಯಮವನ್ನು ಹುಡುಗರ ಕಾಲೇಜಿನಲ್ಲೂ ಹೇರಬೇಕು ಎಂದು ಅಕ್ತರ್ ವಾದಿಸುತ್ತಾರೆ.ನಾವು ಆಧುನಿಕತೆಯ ಬಗ್ಗೆ ಮಾತನಾಡುತ್ತೇವೆ. ಆದರೆ ಇಂಥ ನಿಯಮಾವಳಿಗಳು ನಾವು ಆಧುನಿಕತೆಯಿಂದ ಹಿಂದೆ ಸರಿಯುತ್ತಿರುವುದಕ್ಕೆ ಉದಾಹರಣೆ ಎಂದು ಇನ್ನೊಬ್ಬ ವಿದ್ಯಾರ್ಥಿನಿ ನಿಯಮದ ಬಗ್ಗೆ ಅಸಮಾಧಾನ ವ್ಯಕ್ತಪಡಿಸುತ್ತಾರೆ. |