ಪ್ರಥಮದರ್ಜೆಯ ಹವಾನಿಯಂತ್ರಿತ ಬೋಗಿಯಲ್ಲಿ ತಾನು ಮತ್ತು ಇತರ ಮೂವರು ಸಹಚರರು ಜೀವನಪರ್ಯಂತ ಜೀಪ್ರಯಾಣಿಸುವ ಪುಕ್ಕಟೆ ಪಾಸ್! ಇದು ಮಾಜಿ ರೈಲ್ವೇ ಸಚಿವ ಲಾಲೂಪ್ರಸಾದ್ ಯಾದವ್‌ರಿಗೆ ಅವರ ಆಡಳಿತಾವಧಿಯ ಕೊನೆಯಲ್ಲಿ ಲಭಿಸಿದ ಉಡುಗೊರೆ. ಅಲ್ಲದೆ ಈ ವಿವಾದಾತ್ಮಕ ಆದೇಶವನ್ನು ಮೇ19ರಂದು ನೀಡಲಾಗಿದೆ. ಅಂದರೆ, ಲೋಕಸಭಾ ಚುನಾವಣೆಯ ಮತಎಣಿಕೆ ನಡೆದ ಬಳಿಕ.
ಈ ಉಡುಗೊರೆಯನ್ನು ರೈಲ್ವೇಖಾತೆಯ ಮಾಜಿ ರಾಜ್ಯ ಸಚಿವರಿಗೂ ವಿಸ್ತರಿಸಲಾಗಿದೆ. ಮಾಜಿ ರಾಜ್ಯ ಸಚಿವರು ಒಬ್ಬ ಸಹಚರ ಹಾಗೂ ಒಬ್ಬ ಸಹಾಯಕನೊಂದಿಗೆ ಪ್ರಥಮದರ್ಜೆಯ ಹವಾನಿಯಂತ್ರಿತ ಬೋಗಿಯಲ್ಲಿ ಪ್ರಯಾಣಿಸಬಹುದಾಗಿದೆ.
ರೈಲ್ವೇ ಸಚಿವಾಲಯದ ಹಣಕಾಸು ಇಲಾಖೆಯ ಸಹವರ್ತನೆಯೊಂದಿಗೆ ಈ ಆದೇಶವನ್ನು ರೈಲ್ವೇ ಮಂಡಳಿಯ ಜಂಟಿ ನಿರ್ದೇಶಕರು ನೀಡಿದ್ದಾರೆ. ಅವರು ತಮ್ಮ ಆದೇಶದಲ್ಲಿ, ನಿಯಮಗಳಿಗೆ ತಿದ್ದುಪಡಿಗೊಳಿಸಲು 'ಸಂತಸ'ಗೊಂಡಿರುವುದಾಗಿ ಹೇಳಿದ್ದಾರೆ.
ಆದರೆ, ಈ ಆದೇಶಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿರುವ ವಿರೋಧ ಪಕ್ಷ ಬಿಜೆಪಿಯು ಈ ಆದೇಶವನ್ನು ಹಿಂತೆಗೆದುಕೊಳ್ಳುವಂತೆ ರೈಲ್ವೇ ಸಚಿವೆ ಮಮತಾ ಬ್ಯಾನರ್ಜಿ ಅವರನ್ನು ಒತ್ತಾಯಿಸಿದ್ದು, ರೈಲ್ವೇಮಂಡಳಿಯು ಕೈಗೊಂಡಿರುವ ಈ ಆದೇಶವು 'ಆನೈತಿಕ' ಎಂದು ಹೇಳಿದೆ.
ಚುನಾವಣಾ ಫಲಿತಾಂಶಗಳನ್ನು ಮೇ 16ರಂದು ಘೋಷಿಸಲಾಗಿದೆ. ಮತ್ತು ಉಚಿತಪಾಸ್ ಕುರಿತ ನಿರ್ಧಾರವು ರೈಲ್ವೇಸ್‌ನ ಪ್ರಧಾನ ಮ್ಯಾನೇಜರ್‌ಗಳಿಗೆ ಮೇ19ರಂದು ತಲುಪಿದೆ ಎಂದು ಬಿಜೆಪಿಯ ರಾಮ್ ನಾಯ್ಕ್ ಅವರು ಮಮತಾ ಬ್ಯಾನರ್ಜಿ ಅವರಿಗೆ ಬರೆದಿರುವ ಪತ್ರದಲ್ಲಿ ಹೇಳಿದ್ದಾರೆ.
ಲೋಕಸಭಾ ಚುನಾವಣೆಯ ಫಲಿತಾಂಶಗಳು ಘೋಷಣೆಯಾದ ಬಳಿಕ ಈ ನಿರ್ಧಾರ ಕೈಗೊಂಡಿರುವುದು ವೈಯಕ್ತಿಕ ಲಾಭಕ್ಕಾಗಿ ಮತ್ತು ಇದು ಸರಿಯಲ್ಲ ಹಾಗೂ ಅನೈತಿಕ ಎಂದು ನಾಯ್ಕ್ ಅವರು ಪತ್ರದಲ್ಲಿ ಹೇಳಿದ್ದಾರೆ. ನಾಯ್ಕ್ ಅವರೂ ರೈಲ್ವೇ ಇಲಾಖೆಯ ಸ್ವತಂತ್ರ ನಿರ್ವಹಣೆಯ ಮಾಜಿ ರಾಜ್ಯ ಸಚಿವರು.
|