ಹಿಂಸಾಜರ್ಜರಿತ ಕಾಶ್ಮೀರಕ್ಕೆ ಗುರವಾರ ಭೇಟಿ ನೀಡಿದ ಗೃಹಸಚಿವ ಪಿ.ಚಿದಂಬರಂ ಅವರು ರಾಜ್ಯದ ಭದ್ರತಾವಿಚಾರಗಳನ್ನು ಮತ್ತು ಅಭಿವೃದ್ಧಿ ಯೋಜನೆಗಳ ಕುರಿತು ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರೊಂದಿಗೆ ಚರ್ಚಿಸಿದರು.
ಎರಡು ದಿನಗಳ ಭೇಟಿಗಾಗಿ ಇಲ್ಲಿಗೆ ಆಗಮಿಸಿರುವ ಸಚಿವರು ಸ್ಥಳಕ್ಕೆ ಭೇಟಿನೀಡಿ ಭದ್ರತಾ ಸ್ಥಿತಿಯ ಪರಿಶೀಲನೆ ನಡೆಸಲಿದ್ದಾರೆ.
ಹಿರಿಯ ಅಧಿಕಾರಿಗಳ ತಂಡದೊಂದಿಗೆ ಆಗಮಿಸಿರುವ ಚಿದಂಬರಂ ಅವರು ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆ ಹಾಗೂ ಸೇನಾ ಸ್ಥಿತಿಯನ್ನು ಪರಾಮರ್ಷೆ ಮಾಡಲು ಏಕೀಕೃತ ಕಮಾಂಡನ್ನು ಭೇಟಿಮಾಡಲಿದ್ದಾರೆ.
ನೂತನ ಸರ್ಕಾರದಲ್ಲಿ ಗೃಹಸಚಿವರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಪ್ರಥಮಬಾರಿಗೆ ಕಾಶ್ಮೀರಕ್ಕೆ ಭೇಟಿ ನೀಡಿರುವ ಸಚಿವರು ಸೇನಾಧಿಕಾರಿಗಳಿಂದ ಅಕ್ರಮ ನುಸುಳುವಿಕೆಯ ಕುರಿತು ವರದಿಗಳನ್ನು ಪಡೆಯಲಿದ್ದಾರೆ.
ಇತ್ತೀಚಿನ ದಿವಸಗಳಲ್ಲಿ ಸುಮಾರು 200 ಉಗ್ರರು ರಾಜ್ಯದೊಳಕ್ಕೆ ನುಸುಳುವಲ್ಲಿ ಸಫಲರಾಗಿದ್ದಾರೆ ಎಂದು ರಾಜ್ಯ ಸರ್ಕಾರದ ವರದಿ ತಿಳಿಸಿದೆ.
ಇದೇವೇಳೆ ಜೂನ್ 15ರಿಂದ ಆರಂಭಗೊಳ್ಳಲಿರುವ ಅಮರನಾಥ್ ಯಾತ್ರೆಗೆ ಭತ್ರತಾ ವ್ಯವಸ್ಥೆಯ ಕುರಿತ ಚರ್ಚೆಯೂ ನಿಗದಿಯಾಗಿದೆ. |