ಜಮ್ಮು ಕಾಶ್ಮೀರದಲ್ಲಿ ಸಿಆರ್‌ಪಿಎಫ್ ನಿಯೋಜನೆಯನ್ನು ಪುನರ್ಪರಿಶೀಲಿಸಲು ಉನ್ನತ ಮಟ್ಟದ ಸಮಿತಿ ನಿರ್ಧರಿಸಿದ್ದು, ಅರೆಮಿಲಿಟರಿ ಪಡೆಯು ಎರಡನೇ ಪಾತ್ರವನ್ನು ಮಾತ್ರ ವಹಿಸಬೇಕೆಂದು ಕೇಂದ್ರ ಸರ್ಕಾರ ಇಚ್ಛಿಸುವುದಾಗಿ ಗೃಹಸಚಿವ ಪಿ. ಚಿದಂಬರಂ ಹೇಳಿದ್ದಾರೆ.
ಚಿದಂಬರಂ ಭಾಗವಹಿಸಿದ್ದ ಕೇಂದ್ರೀಕೃತ ಮುಖ್ಯಕಚೇರಿ ಸಭೆಯಲ್ಲಿ ಜಮ್ಮು ಕಾಶ್ಮೀರ ಪೊಲೀಸರು ಪ್ರಮುಖ ಪಾತ್ರವನ್ನು ವಹಿಸುವ ಗುರಿಯೊಂದಿಗೆ ಸಿಆರ್‌ಪಿಎಫ್ ಪಡೆಯನ್ನು ಕ್ರಮೇಣ ಬದಲಿಸುವ ಪ್ರಕ್ರಿಯೆಯನ್ನು ಶೀಘ್ರದಲ್ಲೇ ಆರಂಭಿಸಲು ನಿರ್ಧರಿಸಲಾಯಿತು.ನಾವು ಕಾಶ್ಮೀರದಲ್ಲಿ ಒಂದಾದ ಮೇಲೊಂದು ಪುಟ್ಟ ಹೆಜ್ಜೆಗಳನ್ನು ಇಡುತ್ತೇವೆಯೇ ಹೊರತು ದಾಪುಗಾಲು ಹಾಕುವುದಿಲ್ಲವೆಂದು ಚಿದಂಬರಂ ತಿಳಿಸಿದರು.
ಕಾಶ್ಮೀರ ಪರಿಸ್ಥಿತಿ ಅವಲೋಕನಕ್ಕೆ ಎರಡು ದಿನಗಳ ಭೇಟಿ ನೀಡಿರುವ ಅವರು, ರಾಜ್ಯದಲ್ಲಿ ನಿಯೋಜಿಸಿರುವ ಕೇಂದ್ರ ಅರೆಮಿಲಿಟರಿ ಪಡೆಗಳ ಪಾತ್ರವನ್ನು ನಿರ್ಬಂಧಿಸಲು ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದ ನಡುವೆ ಒಮ್ಮತ ಮೂಡಿರುವುದಾಗಿ ಅವರು ಹೇಳಿದರು.
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸುಧಾರಣೆಗೆ ಅನೇಕ ಕ್ರಮಗಳ ರೂಪುರೇಷೆ ಬಿಚ್ಚಿಟ್ಟ ಅವರು, ನಮ್ಮ ಮುಖ್ಯ ಗುರಿಯು ಜಮ್ಮು ಕಾಶ್ಮೀರ ಪೊಲೀಸರ ಸುಪರ್ದಿಗೆ ಕಾನೂನು ಸುವ್ಯವಸ್ಥೆಯನ್ನು ಒಪ್ಪಿಸುವುದು ಎಂದು ಹೇಳಿದರು. ಮುಖ್ಯಮಂತ್ರಿ ಓಮರ್ ಅಬ್ದುಲ್ಲಾ ಸಭೆಯಲ್ಲಿ ಉಪಸ್ಥಿತರಿದ್ದರು. |