ಭಯೋತ್ಪಾದನಾ ನಿಗ್ರಹ ದಳಕ್ಕೆ (ಎಟಿಎಸ್) ಏಳು ತಿಂಗಳಾದರೂ, ಹೊಸ ಅಧ್ಯಕ್ಷರನ್ನು ನೇಮಕ ಮಾಡದಿರುವ ಮಹಾರಾಷ್ಟ್ರ ರಾಜ್ಯ ಸರ್ಕಾರದ ದಿವ್ಯ ನಿರ್ಲಕ್ಷ್ಯವನ್ನು ಬಾಂಬೆ ಹೈಕೋರ್ಟ್ ತರಾಟೆಗೆ ತೆಗೆದುಕೊಂಡ ಕೆಲವೇ ಗಂಟೆಗಳಲ್ಲಿ ಮಹಾರಾಷ್ಟ್ರ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡಿದೆ. ಗೃಹಸಚಿವೆ ಜಯಂತಿ ಪಾಟೀಲ್ ಎಟಿಎಸ್‌ಗೆ ಕೆ.ಪಿ.ರಘುವಂಶಿ ಅವರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಿದ್ದಾರೆ.
ಗುರುವಾರವಷ್ಟೆ ಬಾಂಬೆ ಹೈಕೋರ್ಟ್ ಮಹಾರಾಷ್ಟ್ರ ಭಯೋತ್ಪಾದನ ನಿಗ್ರಹ ದಳಕ್ಕೆ ಹೊಸ ಅಧ್ಯಕ್ಷರ ನೇಮಕಾತಿ ನಡೆಸದಿರುವ ಬಗ್ಗೆ ತೀವ್ರ ತರಾಟೆಗೆ ತೆಗೆದುಕೊಂಡಿತ್ತು. ಜತೆಗೆ ನೇಮಕಾತಿಗೆ ನಾಲ್ಕು ವಾರ ಕಾಲಾವಕಾಶವನ್ನೂ ನೀಡಿತ್ತು.
ನವೆಂಬರ್ 26ರ ಮುಂಬೈ ದಾಳಿಯ ಸಮಯದಲ್ಲಿ ಮರಣಹೊಂದಿದ ಭಯೋತ್ಪಾದನ ನಿಗ್ರಹ ದಳದ ಅಧ್ಯಕ್ಷ ಹೇಮಂತ್ ಕರ್ಕರೆ ಅವರ ನಂತರ ಆ ಸ್ಥಾನಕ್ಕೆ ಕಳೆದ ಏಳು ತಿಂಗಳ ಅವಧಿಯಲ್ಲಿ ನೇಮಕಾತಿಯೇ ನಡೆಸಿರಲಿಲ್ಲ. ಹೀಗಾಗಿ, ಮುಂಬೈ ದಾಳಿ ಕುರಿತು ಸಲ್ಲಿಸಲಾಗಿದ್ದ ಹಲವು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆ ನಡೆಸಿದ ಹೈಕೋರ್ಟ್, 'ಅಧ್ಯಕ್ಷ ಸ್ಥಾನ ತೆರವುಗೊಂಡು ಏಳು ತಿಂಗಳಾದರೂ ಆ ಬಗ್ಗೆ ರಾಜ್ಯ ಸರ್ಕಾರ ಗಮನ ಹರಿಸಿಲ್ಲ. ಭಯೋತ್ಪಾದನಾ ನಿಗ್ರಹ ದಳದ ಮಾಜಿ ಅಧ್ಯಕ್ಷ ಹಾಗೂ ಹಾಲಿ ಹೆಚ್ಚುವರಿ ಪ್ರಧಾನ ಪೊಲೀಸ್ ಮಹಾನಿರ್ದೇಶಕರಾದ ಕೆ.ಪಿ.ರಘುವಂಶಿ ಅವರೇ ಕಳೆದ ಏಳು ತಿಂಗಳುಗಳಿಂದ ಹೇಮಂತ್ ಅವರ ಹುದ್ದೆಯನ್ನು ಹೆಚ್ಚುವರಿಯಾಗಿ ವಹಿಸಿಕೊಂಡಿದ್ದಾರೆ. ಆದರೆ ಆ ಸ್ಥಾನಕ್ಕೆ ಇನ್ನೂ ಯಾರನ್ನೂ ಸರ್ಕಾರ ಆಯ್ಕೆಯೇ ಮಾಡಿಲ್ಲ. ಅಧ್ಯಕ್ಷ ಸ್ಥಾನಕ್ಕೆ ಸೂಕ್ತ ಅಭ್ಯರ್ಥಿಯೇ ಇಲ್ಲವೇ ಎಂದು ಎಂದು ಕೋರ್ಟ್ ರಾಜ್ಯ ಸರ್ಕಾರಕ್ಕೆ ಛೀಮಾರಿ ಹಾಕಿತ್ತು.
ಮುಖ್ಯ ನ್ಯಾಯಮೂರ್ತಿ ಸ್ವತಂತರ್ ಕುಮಾರ್, ಹಾಗೂ ನ್ಯಾಯಮೂರ್ತಿ ಎಸ್.ಸಿ.ಧರ್ಮಾಧಿಕಾರಿ ಅವರಿದ್ದ ವಿಭಾಗೀಯ ಪೀಠ, ಸರ್ಕಾರ ಮುಂಬಾ ದಾಳಿಯ ನಂತರ ಭದ್ರತೆಯನ್ನು ಹೆಚ್ಚಿಸುವಲ್ಲಿ ಹಾಗೂ ಕಾಯ್ದುಕೊಳ್ಳುವಲ್ಲಿ ಯಾವುದೇ ಸೂಕ್ತ ಕ್ರಮ ಕೈಗೊಳ್ಳುವಲ್ಲಿ ಎಡವಿದೆ ಎಂದೂ ಆರೋಪಿಸಿದ್ದರು.
ಈಗ ಆಯ್ಕೆಯಾಗಿರುವ ರಘುವಂಶಿ ಅವರು ಈ ಮೊದಲು ಎಟಿಎಸ್‌ಗೆ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿ ಅನುಭವ ಹೊಂದಿದವರು. ಹಾಗೂ ಹಾಲಿ ಹೆಚ್ಚುವರಿ ಪ್ರಧಾನ ಪೊಲೀಸ್ ಮಹಾನಿರ್ದೇಶಕರಾಗಿ ಕೆಲಸ ಮಾಡಿರುವ ಅನುಭವ ಹೊಂದಿದವರು. ಜತೆಗೆ ಹೇಮಂತ್ ಸಾವಿನ ನಂತರ ಹೆಚ್ಚುವರಿಯಾಗಿ ಎಟಿಎಸ್ ಹುದ್ದೆಯನ್ನು ತಾತ್ಕಾಲಿಕವಾಗಿ ಅಲಂಕರಿಸಿದವರು. ಈಗ ಮತ್ತೆ ಅವರಿಗೇ ಎಟಿಎಸ್ ಅಧ್ಯಕ್ಷ ಸ್ಥಾನ ಒಲಿದಿದ್ದು, ಅದಕ್ಕೆ ರಂಘುವಂಶಿ ಸಂತಸ ವ್ಯಕ್ತಪಡಿಸಿದ್ದಾರೆ. ಭಯೋತ್ಪಾದನಾ ನಿಗ್ರಹ ದಳಕ್ಕೆ ಮತ್ತೆ ಮುಖ್ಯಸ್ಥನಾಗಿರುವುದು ನನಗೆ ಹೊಸ ಸವಾಲು. ನಾನು ಸವಾಲನ್ನು ಸಮರ್ಥವಾಗಿಯೇ ಎದುರಿಸುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. |