ಕರ್ನಾಟಕ ಬಿಜೆಪಿಯ ಮಾದರಿಯಲ್ಲಿ ಪಕ್ಷದ ಕೇಂದ್ರೀಯ ಮಟ್ಟದಲ್ಲೂ ಅಸಮಾಧಾನದ ಅಲೆಯು ತೀವ್ರಗೊಳ್ಳುತ್ತಿದ್ದು, ಜಸ್ವಂತ್ ಸಿಂಗ್ ಬಳಿಕ ಇದೀಗ ಮತ್ತೊಬ್ಬ ಹಿರಿಯ ಮುಖಂಡ ಬೃಜೇಶ್ ಮಿಶ್ರಾ ಧ್ವನಿಯೆತ್ತಿದ್ದಾರೆ. ಯುವ ನೇತಾರ ವರುಣ್ ಗಾಂಧಿ ಅವರ 'ದ್ವೇಷ ಭಾಷಣ'ವೇ ಪಕ್ಷಕ್ಕೆ ಮುಳುವಾಯಿತು ಎಂಬುದು ಅವರ ಅಭಿಪ್ರಾಯ.
ಎನ್‌ಡಿಎ ಅವಧಿಯಲ್ಲಿ ರಾಷ್ಟ್ರೀಯ ಭದ್ರತಾ ಸಲಹೆಗಾರರಾಗಿದ್ದ ಮಿಶ್ರಾ, ಚುನಾವಣಾ ಸಂದರ್ಭದಲ್ಲಿ ಬಿಜೆಪಿಯ ಪ್ರಚಾರ ವೈಖರಿ ವಿರುದ್ಧ ಕಿಡಿ ಕಾರುತ್ತಾ, ಬಿಜೆಪಿಯು ಅನುಸರಿಸಿದ 'ಋಣಾತ್ಮಕ ರಾಜಕೀಯ'ವನ್ನು ಜನತೆ ಇಷ್ಟಪಡಲಿಲ್ಲ ಎಂದಿದ್ದಾರೆ.
ಎನ್‌ಡಿಟಿವಿಯ 'ವಾಕ್ ದಿ ಟಾಕ್' ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹಿಂದುತ್ವದ ಸಂದೇಶವು ಸರಿಯಾಗಿ ಕೆಲಸ ಮಾಡಿಲ್ಲ. ವಾಸ್ತವಿಕವಾಗಿ ಬಿಜೆಪಿಯು ವರುಣ್ ಗಾಂಧಿ ವಿರುದ್ಧ ಕ್ರಮ ಕೈಗೊಳ್ಳಬೇಕಾಗಿತ್ತು ಎಂದರು.
ಬುಧವಾರ ಮುಚ್ಚಿದ ಬಾಗಿಲ ಕೊಠಡಿಯಲ್ಲಿ ನಡೆದ ಬಿಜೆಪಿ ಪರಾಮರ್ಶನಾ ಸಭೆಯಲ್ಲಿ ಜಸ್ವಂತ್ ಸಿಂಗ್ ಅವರು ಕೂಡ ಬಿಜೆಪಿ ನಾಯಕತ್ವದ ಹಲವಾರು ನಿರ್ಧಾರಗಳನ್ನು ಟೀಕಿಸಿದ್ದರು.
ಹಿಂದುತ್ವ ಎಂದರೆ ಏನರ್ಥ ಮತ್ತು ಯಾವ ನಿಲುವು ಹೊಂದಬೇಕು ಎಂಬ ಬಗ್ಗೆ ಪಕ್ಷಕ್ಕೆ ಸ್ಪಷ್ಟ ಕಲ್ಪನೆಯಿರಲಿಲ್ಲ. ಅತಿರೇಕದ ಶಕ್ತಿಗಳು ಪಕ್ಷದ ಪ್ರತಿಷ್ಠೆಗೆ ಹಾನಿ ಮಾಡಿದವು ಮತ್ತು ಅದು ಹಳೆಯ ಪಕ್ಷವಾಗುವ ಎಲ್ಲ ಅಪಾಯಗಳಿದ್ದವು ಎಂದು ಮಿಶ್ರಾ ಹೇಳಿದರು. |