ಬಹುಶಃ ದೇಶದ ಎಲ್ಲಾ ಕೇಂದ್ರ ಸರ್ಕಾರಿ ನೌಕರರು ಇದನ್ನು ತಮ್ಮ ದುರದೃಷ್ಟದ ಪರಮಾವಧಿ ಎಂದುಕೊಳ್ಳಬಹುದು. ಯಾಕೆಂದರೆ, ಮುಂದಿನ ವರ್ಷ ಅವರು ಹಲವು ರಜೆಗಳನ್ನು ಕಳೆದುಕೊಳ್ಳಲಿರುವುದು ಖಂಡಿತ. ಮುಂದಿನ ವರ್ಷ ಇರುವ 17 ರಜೆಗಳ ಪೈಕಿ ಎಂಟು ರಜೆಗಳು ಶನಿವಾರ, ಭಾನುವಾರಗಳಂದೇ ಬರುತ್ತಿವೆ!
ಪರ್ಯಾಯ ರಜೆಗೆ ಅವಕಾಶ ಇಲ್ಲದಿರುವುದರಿಂದ ಕಡ್ಡಾಯ ರಜೆಗಳು ವಾರದ ರಜೆಯಲ್ಲೇ ಬರುವುದರಿಂದ ಎಂಟು ರಜೆಗಳು ವಾರದ ರಜೆಯೊಂದಿಗೇ ಕಳೆದುಹೊಗಲಿವೆ.
ಮುಂದಿನ ವರ್ಷ ಶುಕ್ರವಾರಗಳಂದು ಸಿಗುವ ರಜೆಯೆಂದರೆ ಕೇವಲ ಮೂರೇ ಮೂರು. ಗುಡ್‌ಫ್ರೈಡೇ, ದೀಪಾವಳಿ ಹಾಗೂ ಮೊಹರಂಗಳು ಶುಕ್ರವಾರಗಳಲ್ಲಿ ಬರುವುದರಿಂದ ಶುಕ್ರವಾರದ ಜತೆಗೇ ಸರಣಿಯಲ್ಲಿ ಶನಿವಾರ, ಭಾನುವಾರಗಳೂ ಬರುವುದರಿಂದ ಆರಾಮವಾಗಿ ಕಳೆಯಬಹುದು. ಆದರೆ, 17 ರಜೆಗಳಲ್ಲಿ ಎಂಟು ರಜೆಗಳು ಶನಿವಾರ, ಭಾನುವಾರಗಳಂದೇ ಬರುವುದರಿಂದ ಸರ್ಕಾರಿ ಉದ್ಯೋಗಿಗಳಿಗೆ ಎಂಟು ರಜೆಗಳ ನಷ್ಟವಾಗಲಿದೆ.
17 ಕಡ್ಡಾಯ ರಜೆಗಳಲ್ಲಿ ಎಂಟು- ಮಿಲಾದ್ ಉನ್ ನಬಿ, ಮಹಾವೀರ ಜಯಂತಿ, ಸ್ವಾತಂತ್ರ್ಯ ದಿನ, ಈದ್ ಉಲ್ ಫಿತರ್, ಗಾಂಧೀ ಜಯಂತಿ, ದಸರಾ, ಗುರುನಾನಕ್ ಜನ್ಮದಿನ ಹಾಗೂ ಕ್ರಿಸ್‌ಮಸ್ ಶನಿವಾರ ಅಥವಾ ಭಾನುವಾರಗಳಂದೇ ಇರಲಿವೆ.
ಪಟ್ಟಿಯ ಪ್ರಕಾರ, ಕಡ್ಡಾಯ ರಜೆಗಳು ಹೀಗಿವೆ. ಗಣರಾಜ್ಯ ದಿನ (ಜ.26), ಮಿಲಾದ್ ಉನ್ ನಬಿ (ಮಹಮ್ಮದ್ ಜಯಂತಿ, ಫೆ.27), ಹೋಲಿ (ಮಾ.1), ರಾಮ ನವಮಿ (ಮಾ 24), ಮಹಾವೀರ ಜಯಂತಿ (ಮಾ.28), ಗುಡ್‌ಫ್ರೈಡೇ (ಏ.2), ಬುದ್ಧ ಪೂರ್ಣಿಮೆ (ಮೇ 27), ಸ್ವಾತಂತ್ರ್ಯ ದಿನ (ಆ.15), ಕೃಷ್ಣ ಜನ್ಮಾಷ್ಟಮಿ (ಸೆ.2), ಈದ್ ಉಲ್ ಫಿತರ್ (ಸೆ.11), ಮಹಾತ್ಮಾ ಗಾಂಧಿ ಜಯಂತಿ (ಅ.2), ದಸರಾ (ಅ.17), ದೀಪಾವಳಿ (ನ.5), ಬಕ್ರೀದ್ (ನ.17), ಗುರುನಾನಕ್ ಜಯಂತಿ (ನ.21) ಮೊಹರಂ (ಡಿ.17) ಕ್ರಿಸ್‌ಮಸ್ (ಡಿ.25).
ಆದರೆ, ಈದ್ ಉಲ್ ಫಿತರ್, ಬಕ್ರೀದ್, ಮೊಹರಂ, ಮಹಮ್ಮದ್ ಪೈಗಂಬರ್ ಜಯಂತಿಯ ರಜಾದಿನಗಳಲ್ಲಿ ವ್ಯತ್ಯಾಸವಾಗಲೂಬಹುದು. ಅದು ಚಂದ್ರನ ದರ್ಶನದ ಮೇಲೆ ಅವಲಂಬಿಸಿದೆ. ಉದ್ಯಮ, ವಾಣಿಜ್ಯ ಹಾಗೂ ವ್ಯಾಪಾರ ವಲಯಗಳಿಗೆ 3 ರಾಷ್ಟ್ರೀಯ ರಜಾದಿನಗಳೂ ಸೇರಿದಂತೆ ಒಟ್ಟು 16 ರಜೆಯನ್ನು ಸರ್ಕಾರ ಘೋಷಿಸಿದೆ. ಆದರೆ, ಬ್ಯಾಂಕ್‌ಗಳಿಗೆ 15 ದಿನಗಳ ರಜೆ ಘೋಷಿಸಿದೆ. |