ಸಂಸತ್ ದಾಳಿಯ ರೂವಾರಿ ಅಫ್ಜಲ್ ಗುರುವಿಗಿಂತಲೂ ಹಿಂದಿನ ಕ್ಷಮಾದಾನ ಅರ್ಜಿಗಳು ಇತ್ಯರ್ಥವಾಗುವವರೆಗೂ ಆತನನ್ನು ಗಲ್ಲಿಗೇರಿಸುವುದು ಅಸಾಧ್ಯ ಎಂದು ಕೇಂದ್ರದ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರ ಅಭಿಪ್ರಾಯಪಟ್ಟಿದೆ.
ಅದು ಅಫ್ಜಲ್ ಅಥವಾ ಬೇರೆ ಯಾರೋ ಎಂಬುದು ಪ್ರಶ್ನೆಯಲ್ಲ. ನೀವು ಜನರನ್ನು ಆರಿಸಿ ಗಲ್ಲಿಗೇರಿಸುವಂತಿಲ್ಲ. ಇಲ್ಲೊಂದು ನ್ಯಾಯ ವ್ಯವಸ್ಥೆಯಿದೆ ಎಂದು ಕಾನೂನು ಸಚಿವ ಎಂ.ವೀರಪ್ಪ ಮೊಯಿಲಿ ಅವರು ಎನ್‌ಡಿಟಿವಿಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.
ಅಫ್ಜಲ್ ಗುರು ಮತ್ತು ಇತರ 28 ಮಂದಿಯ ಕ್ಷಮಾದಾನ ಅರ್ಜಿಯು ರಾಷ್ಟ್ರಪತಿಯೆದುರು ಪರಿಶೀಲನೆಗೆ ಬಾಕಿ ಇದ್ದು, ಈ ಕುರಿತು ಕೇಳಲಾದ ಪ್ರಶ್ನೆಗೆ ಅವರು ಉತ್ತರಿಸುತ್ತಿದ್ದರು.
ಮರಣದಂಡನೆ ಪಟ್ಟಿಯಲ್ಲಿ ಅಫ್ಜಲ್ ಗುರು ಮಾತ್ರವೇ ಅಲ್ಲ, ಇತರ ಭಯೋತ್ಪಾದಕರೂ ಇದ್ದಾರೆ. ಇಂದಿರಾ ಗಾಂಧಿಯನ್ನು ಕೊಂದ ಭಯೋತ್ಪಾದಕರೂ ಕಾಯುತ್ತಿದ್ದಾರೆ. ಅವನನ್ನು ಇನ್ನೂ ಗಲ್ಲಿಗೇರಿಸಿಲ್ಲ. ಮತ್ತೊಬ್ಬ ಭಯೋತ್ಪಾದಕನೂ ಕಾಯುತ್ತಿದ್ದಾನೆ ಎಂದ ಮೊಯಿಲಿ, ನಾವು ಯಾರನ್ನೂ ರಕ್ಷಿಸುತ್ತಿಲ್ಲ. ಆದರೆ ಕ್ಷಮಾದಾನ ಅರ್ಜಿಯ ವ್ಯವಸ್ಥೆಯನ್ನು ರೂಪಿಸುವಲ್ಲಿ ಸಹಮತ ಹೊಂದಿರುವುದಾಗಿ ಹೇಳಿದರು.
ಪಾಕಿಸ್ತಾನದಲ್ಲಿ ಕೂಡ ಹಲವಾರು ಮಂದಿ ಮರಣದಂಡನೆಗೆ ಕಾಯುತ್ತಿದ್ದಾರೆ. ಅದರಲ್ಲಿ ಭಾರತೀಯರೂ ಇದ್ದಾರೆ. ಅವರೆಲ್ಲರನ್ನು ಒಂದೇ ಬಾರಿ ಗಲ್ಲಿಗೇರಿಸಬೇಕೆಂದು ನೀವು ಇಚ್ಛಿಸುತ್ತೀರಾ ಎಂದು ಮೊಯಿಲಿ ಮರಳಿ ಪ್ರಶ್ನಿಸಿದರು.
ಅಲ್ಪಸಂಖ್ಯಾತರ ಓಲೈಕೆ ತಂತ್ರವಾಗಿ ಮತ್ತು ವೋಟ್ ಬ್ಯಾಂಕ್ ಕಳೆದುಹೋಗಬಹುದೆಂಬ ಆತಂಕದಿಂದ ಕಾಂಗ್ರೆಸ್ ಪಕ್ಷವು ಅಫ್ಜಲ್ ಗುರುವನ್ನು ಗಲ್ಲಿಗೇರಿಸಲು ವಿಳಂಬಿಸುತ್ತಿದೆ ಎಂದು ಪ್ರತಿಪಕ್ಷ ಬಿಜೆಪಿಯು ಆರೋಪಿಸಿರುವುದನ್ನು ಇಲ್ಲಿ ಸ್ಮರಿಸಬಹುದು. |