ಮಾಜಿ ರೈಲ್ವೆ ಸಚಿವರಿಗೆ ತಮ್ಮ ಮೂರು ಮಂದಿ ಸಹಚರರ ಜತೆಗೆ ಪ್ರಥಮ ದರ್ಜೆ ಎಸಿ ವಿಭಾಗದ ರೈಲಿನಲ್ಲಿ ಉಚಿತವಾಗಿ ಪ್ರಯಾಣಿಸಲು ಅವಕಾಶ ನೀಡುವ ಮಾಜಿ ರೈಲ್ವೆ ಸಚಿವ ಲಾಲು ಪ್ರಸಾದ್ ಯಾದವ್ ಅವರ ಆದೇಶವನ್ನು ಹಾಲಿ ರೈಲ್ವೆ ಸಚಿವಾಲಯ ರದ್ದು ಮಾಡಲು ಚಿಂತಿಸಿದೆ.ಚುನಾವಣೆ ಫಲಿತಾಂಶ ಹೊರಬಿದ್ದ ಎರಡೇ ದಿನಗಳಲ್ಲಿ ಮೇ 19ರಂದು ಹಿಂದಿದ್ದ ಆದೇಶಕ್ಕೆ ರೈಲ್ವೆ ಇಲಾಘೆ ತಿದ್ದುಪಡಿ ಮಾಡಿ ಹೊಸ ಆದೇಶ ಹೊರಡಿಸಿತ್ತು. ಹಿಂದಿದ್ದ ಆದೇಶದ ಪ್ರಕಾರ, ಮಾಜಿ ಸಚಿವರ ಜತೆಗೆ ಒಬ್ಬ ಮಾತ್ರ ಉಚಿತವಾಗಿ ಪ್ರಯಾಣಿಸಬಹುದಿತ್ತು. ಲಾಲು ಅದನ್ನು ತಕ್ಷಣ ಮೂರಕ್ಕೇರಿಸಿದ್ದರು.ಮಾಜಿ ರೈಲ್ವೆ ಸಚಿವರಾಗಿದ್ದ ಬಿಜೆಪಿ ಮುಖಂಡ ರಾಮ್ ನಾಯ್ಕ್, ರೈಲ್ವೆ ಸಚಿವೆ ಮಮತಾ ಬ್ಯಾನರ್ಜಿ ಅವರಿಗೆ ಪತ್ರ ಬರೆದಿದ್ದು, ಸಚಿವರ ಪ್ರಾಧಿಕಾರದ ಭಾರೀ ದುರುಪಯೋಗ ನಡೆಯುತ್ತಿದೆ ಎಂದಿದ್ದರು. ಜತೆಗೆ ಖಾಸಗಿ ಹಿತಕ್ಕಾಗಿ ಲೋಕಸಭಾ ಫಲಿತಾಂಶ ಬಂದ ಮೇಲೆ ಬದಲಾವಣೆ ಮಾಡುವುದು ತಪ್ಪು ಹಾಗೂ ನೀತಿಯುಕ್ತ ಬೆಳವಣಿಗೆ ಅಲ್ಲ ಎಂದಿದ್ದರು.ಈ ಬೆಳವಣಿಗೆಯ ನಂತರ ತಕ್ಷಣ ಪ್ರತಿಕ್ರಿಯಿಸಿರುವ ರೈಲ್ವೆ ಸಚಿವೆ ಮಮತಾ ಬ್ಯಾನರ್ಜಿ, ರಾಮ್ ನಾಯ್ಕ್ ಅವರ ಪತ್ರ ನನಗೆ ತಲುಪಿದೆ. ಅವರ ವಾದ ಸರಿಯಾಗಿಯೇ ಇದೆ. ಮಾಜಿ ರೈಲ್ವೆ ಸಚಿವರ ಜತೆಗೆ ಪ್ರಯಾಣ ಮಾಡುವ ಜನರ ಸಂಖ್ಯೆ ಹೆಚ್ಚಿಸುವುದು ಸಲ್ಲ. ಹಾಗೂ ಇದು ಸಾಮಾನ್ಯ ಜನರ ಪ್ರಯಾಣಕ್ಕೆ ಧಕ್ಕೆ ತರುತ್ತದೆ ಎಂದು ಹೇಳಿದ್ದಾರೆ.ಹಾಗಾದರೆ ಬದಲಾವಣೆ ತಂದ ಆದೇಶವನ್ನು ರದ್ದುಗೊಳಿಸುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಬ್ಯಾನರ್ಜಿ, ನಾನು ನಿಮ್ಮ ಮಾತನ್ನು ಒಪ್ಪುತ್ತೇನೆ. ಲಾಲು ಅವರನ್ನು ಗೌರವಿಸುತ್ತೇನೆ ಎಂದಷ್ಟೆ ಹೇಳಿದರು. ರೈಲ್ವೆ ಸಚಿವಾಲಯದ ಆಪ್ತ ಮೂಲಗಳ ಪ್ರಕಾರ, ಕೆಲವೇ ದಿನಗಳಲ್ಲಿ ಈ ಹೊಸ ಆದೇಶ ರದ್ದುಗೊಳ್ಳಲಿದೆ. |