ಭಯೋತ್ಪಾದಕರು, ಕಳ್ಳಸಾಗಾಣಿಕೆದಾರರು, ನುಸುಳುಕೋರರು ಸಮುದ್ರ ಮಾರ್ಗದಿಂದ ಭಾರತ ಪ್ರವೇಶಿಸುವುದನ್ನು ತಡೆಯುವ ಉದ್ದೇಶದೊಂದಿಗೆ ತೀರ ರಕ್ಷಣಾ ಪಡೆಗಳು 3341 ಕಿ.ಮೀ. ಉದ್ದದ ಅರಬ್ಬೀ ಸಮುದ್ರ ತೀರದಲ್ಲಿ ಮೂರು ದಿನಗಳ 'ರಾಸ್ತಾ ರೋಕೋ' ಕಾರ್ಯಾಚರಣೆ ನಡೆಸಿದವು.
ಕರಾವಳಿ ಪೊಲೀಸ್, ನೌಕಾಪಡೆ, ರಾಜ್ಯ ಮೆರಿಟೈಮ್ ಮಂಡಳಿ, ಮೀನುಗಾರಿಕಾ ಇಲಾಖೆ ಮತ್ತು ಕಸ್ಟಮ್ಸ್ ಇಲಾಖೆಗಳು ಕೂಡ ಇದರಲ್ಲಿ ಪಾಲ್ಗೊಂಡಿದ್ದು, ಕರ್ನಾಟಕ, ಗುಜರಾತ್, ಮಹಾರಾಷ್ಟ್ರ, ಗೋವಾ ಮತ್ತು ಕೇರಳ ತೀರಗಳಲ್ಲಿ ಹಾಗೂ ದಾಮನ್ ಮತ್ತು ದಿಯು, ಲಕ್ಷದ್ವೀಪ ಹಾಗೂ ಮಾಹೆ ಕೇಂದ್ರಾಡಳಿತ ಪ್ರದೇಶಗಳಲ್ಲಿ ಈ ಕಾರ್ಯಾಚರಣೆ ನಡೆಯಿತು.
ಮುಂಗಾರು ಮಳೆಗೆ ಪೂರ್ವಭಾವಿಯಾಗಿ ಸಮುದ್ರ ಮಾರ್ಗದಲ್ಲಿ ರಕ್ಷಣಾ ವಲಯ ಸೃಷ್ಟಿಯ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಇದನ್ನು ಆಯೋಜಿಸಲಾಗಿದ್ದು, ಮೆರಿಟೈಮ್ ಮಂಡಳಿಯು ಶೀಘ್ರದಲ್ಲೇ ಮುಂಗಾರು ಅವಧಿಯಲ್ಲಿ ಕುರಿತು ಸಮುದ್ರದ ಉಬ್ಬರ ಪ್ರದೇಶಗಳಲ್ಲಿ ನಿರ್ಬಂಧ ವಿಧಿಸಿ ಪ್ರಕಟಣೆ ಹೊರಡಿಸಲಿದೆ ಎಂದು ಕರಾವಳಿ ರಕ್ಷಣಾ ಪಡೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
26/11 ಮುಂಬೈ ದಾಳಿಕೋರರು ಸಮುದ್ರ ಮಾರ್ಗದ ಮೂಲಕವೇ ಮುಂಬೈ ಪ್ರವೇಶಿಸಿದ ಬಳಿಕ ಕರಾವಳಿ ರಕ್ಷಣಾ ಪಡೆ, ನೌಕಾಪಡೆ ಹಾಗೂ ಪೊಲೀಸರ ಮೇಲೆ ಒತ್ತಡ ಹೆಚ್ಚಾಗಿತ್ತು. ಈ ಸಂಬಂಧ ತಟ ರಕ್ಷಣೆಯಲ್ಲಿ ಯಾವುದೇ ಹಿನ್ನಡೆಗಳಿದ್ದರೆ ಅದನ್ನು ಸರಿಪಡಿಸಿಕೊಳ್ಳುವ ನಿಟ್ಟಿನಲ್ಲಿ 'ರಾಸ್ತಾ ರೋಕೋ' ಆಯೋಜಿಸಲಾಗಿತ್ತು. |