ಕೇರಳ ರಾಜ್ಯ ಸಹಕಾರಿ ಗ್ರಾಹಕರ ಒಕ್ಕೂಟದ ವತಿಯಿಂದ ಈಗ ಹಿನ್ನೀರಿನ ನಿವಾಸಿಗಳಿಗೆ ಹೊಸತೊಂದು ತೇಲುವ ಅಂಗಡಿ (ವ್ಯಾಪಾರಿ ಮಳಿಗೆ) ಪ್ರತ್ಯಕ್ಷವಾಗಿದೆ. ಇನ್ನು ಮುಂದೆ ಹಿನ್ನೀರಿನ ಪ್ರದೇಶದಲ್ಲಿ ವಾಸಿಸುವವರು ದಿನನಿತ್ಯದ ವಸ್ತುಗಳ ಖರೀದಿಗೆ ಪಟ್ಟಣಕ್ಕೇ ಹೋಗಬೇಕಾಗಿಲ್ಲ. ಮನೆ ಬಾಗಿಲಿಗೇ ತೇಲುವ ಅಂಗಡಿ ಹರಿದುಬರಲಿದೆ. ಬೇಕಾದ್ದನ್ನು ಪಟ್ಟಣದಲ್ಲಿ ಅಂಗಡಿಯಲ್ಲಿ ಖರೀದಿಸುವಂತೆ ಖರೀದಿಸಬಹುದು.
ಒಂದು ಸಾವಿರ ಚದರ ಅಡಿಯ ಶೆಲ್ಫ್ ಇರುವ ತೇಲುವ ಅಂಗಡಿಯ ಹೆಸರು ತ್ರಿವೇಣಿ. ತ್ರಿವೇಣಿ ತೇಲುತ್ತಲೇ ಬೆಳಗ್ಗೆ ಎಂಟು ಗಂಟೆಯಿಂದ ಸಂಜೆ ಆರು ಗಂಟೆವರೆಗೆ ತೆರೆದಿರಲಿದೆ. ತೇಲುತ್ತಲೇ ಸಾಗುವ ಈ ಅಂಗಡಿ ರಸ್ತೆಗಳಲ್ಲಿ ವಾಹನಗಳಲ್ಲಿ ಮಾರಾಟ ಮಾಡುವ ವ್ಯಾಪಾರಿಗಳಂತೆಯೇ. ಆದರೆ ರಸ್ತೆಯ ಬದಲು ಹಿನ್ನೀರಿನಲ್ಲಿ ಇದು ದೋಣಿಯಂತೆ ಚಲಿಸಲಿದೆ.
ಖ್ಯಾತ ಪ್ರವಾಸಿ ತಾಣವಾದ ಕೇರಳದ ಬಹುತೇಕ ಹಿನ್ನೀರಿನ ಪ್ರದೇಶಗಳಲ್ಲಿ ವಾಸಿಸುವವರ ಗೋಳು ಈವರೆಗೆ ಯಾರಿಗೂ ತಲುಪಿರಲಿಲ್ಲ. ಇವರು ದಿನನಿತ್ಯದ ಸಾಮಾನು ಕೊಳ್ಳಲೂ ಕೂಡಾ ನೂರಾರು ಮೈಲಿ ಸಾಗಲೇಬೇಕು. ಸಾಗಲು ಸಾಕಷ್ಟು ಹಣ ಖರ್ಚು ಮಾಡಬೇಕು. ನಮ್ಮನಿಮ್ಮಂತೆ ಮನೆಯ ಪಕ್ಕದ ಅಂಗಡಿಗೆ ಹೋಗಿ ಅರ್ಧ ಕೆಜಿ, ಕಾಲು ಕೆಜಿ ಅಂತ ಕೇಳುವಂತಿಲ್ಲ. ಯಾಕೆಂದರೆ ಇವರಿಗೆ ಮನೆಯ ಮೆಟ್ಟಿಲಿಂದ ಕೆಳಕ್ಕೆ ಕಾಲಿಟ್ಟರೆ ರಸ್ತೆಯಿಲ್ಲ. ಎಲ್ಲೆಲ್ಲೂ ನೀರೋ ನೀರು. ಈಗ ತ್ರಿವೇಣಿ, ವಸ್ತುಗಳನ್ನು ಮಾರುತ್ತಾ ನೀರಿನಲ್ಲೇ ಸಾಗಲಿದೆ.
ತ್ರಿವೇಣಿಯ ಆಗಮನದಿಂದ ಹಿನ್ನೀರಿನ ಪ್ರದೇಶದಲ್ಲಿ ವಾಸಿಸುವವರಿಗೆ ಖುಷಿಯೋ ಖುಷಿ. ಹಲವರು ಇದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ. ಅಲ್ಲಿನ ನಿವಾಸಿ ಶಾಂತಿ ಅನಿಲ್ ಕುಮಾರ್ ಹೇಳುವಂತೆ, ಮೊದಲೆಲ್ಲ ನಮಗೆ ಏನು ಖರೀದಿಸಬೇಕಿದ್ದರೂ ನೂರಾರು ಮೈಲಿ ದೋಣಿಯಲ್ಲಿ ಹೋಗಬೇಕು. ಈಗ ತ್ರಿವೇಣಿ ಬಂದಿದೆ. ಸುಲಭ ಬೆಲೆಯಲ್ಲಿ ಬಹುತೇಕ ಎಲ್ಲ ದೈನಂದಿನ ವಸ್ತುಗಳು ಸಿಗುತ್ತಿದೆ. ಇದರಿಂದ ನಮಗೆ ದಿನನಿತ್ಯದ ಚಟುವಟಿಕೆ ಸುಲಭವಾದಂತಾಗಿದೆ ಎಂದು ಹರ್ಷ ವ್ಯಕ್ತಪಡಿಸುತ್ತಾರೆ.
ತ್ರಿವೇಣಿಯಲ್ಲಿ ಇಂಟರ್‌ನೆಟ್ ಹಾಗೂ ಸೋಲಾರ್‌ನಿಂದ ವಿದ್ಯುತ್ ವ್ಯವಸ್ಥೆ ಇದೆ. ಇದು ಹಿನ್ನೀರಿನಲ್ಲೇ ಸುಮಾರು 50 ವಿವಿಧ ಪ್ರದೇಶಗಳಿಗೆ ಪ್ರತಿದಿನವೂ ಸಾಗುತ್ತದೆ.
ಹಿನ್ನೀರಿನ ಪ್ರದೇಶಗಳಲ್ಲಿ ಸಣ್ಣ ದೋಣಿಗಳಲ್ಲಿ ಹಣ್ಣು, ತರಕಾರಿ ಮಾರುವುದು ವಿಯೆಟ್ನಾಂ, ಥಾಯ್ಲ್ಯಾಂಡ್, ವೆನಿಜುವೆಲಾಗಳಲ್ಲಿ ಸಾಮಾನ್ಯವಾಗಿತ್ತು. ಆದರೆ ವಿಶೇಷ ಸೌಲಭ್ಯಗಳಿರುವ ಎಲ್ಲ ವ್ಯಾಪಾರಿ ಮಳಿಗೆಗಳಂತೆ ಸುಸಜ್ಜಿತ ಸೌಲಭ್ಯ ಹೊಂದಿದ ಪೂರ್ಣ ಪ್ರಮಾಣದ ತೇಲುವ ಅಂಗಡಿಯೊಂದು ಆರಂಭವಾದುದು ಇದೇ ಮೊದಲು ಹೀಗಾಗಿ ಹೊಸ ಸ್ವರೂಪದ ತ್ರಿವೇಣಿ ಸದ್ಯದಲ್ಲೇ ಗಿನ್ನಿಸ್ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ದಾಖಲಾಗಲಿದೆ. |