ಕೈಗಾ ಅಣು ವಿದ್ಯುತ್ ಸ್ಥಾವರದ ಅಣು ವಿಜ್ಞಾನಿ 47ರ ಹರೆಯದ ಲೋಕನಾಥನ್ ಮಹಾಲಿಂಗಂ ಅವರ ನಿಗೂಢ ನಾಪತ್ತೆ ಪ್ರಕರಣದ ವಿವರವನ್ನು ಪಡೆಯುವುದಾಗಿ ಕೇಂದ್ರ ಗೃಹ ಸಚಿವ ಪಿ.ಚಿದಂಬರಂ ಹೇಳಿದ್ದಾರೆ.
ದೆಹಲಿಗೆ ಮರಳಿದ ತಕ್ಷಣ ಈ ನಿಗೂಢ ನಾಪತ್ತೆ ಪ್ರಕರಣದ ಸಂಪೂರ್ಣ ವಿವರಗಳನ್ನು ಪಡೆಯುತ್ತೇನೆ. ಈ ಬಗ್ಗೆ ಮುತುವರ್ಜಿ ವಹಿಸಿತ್ತೇನೆ ಎಂದು ಚಿದಂಬರಂ ಸುದ್ದಿಗಾರರಿಗೆ ತಿಳಿಸಿದರು.
ಕೇಂದ್ರೀಯ ಉದ್ಯಮ ಭದ್ರತಾ ಪಡೆ(ಸಿಐಎಸ್‌ಎಫ್) ಹಾಗೂ ಸ್ಥಳೀಯ ಪೊಲೀಸ್ ಠಾಣೆ ಎರಡೂ ಕಳೆದ ಐದು ದಿನಗಳಿಂದ ಕಾರ್ಯಪ್ರವೃತ್ತರಾಗಿದ್ದು, ಕಾಣೆಯಾಗಿರುವ ವಿಜ್ಞಾನಿಯ ಶೋಧದಲ್ಲಿ ತೊಡಗಿದ್ದಾರೆ. ಇವೆರಡೂ ತಂಡಗಳೂ ವಿಜ್ಞಾನಿ ಮಹಾಲಿಂಗಂ ಅವರನ್ನು ಅಪಹರಿಸಲಾಗಿದೆಯೋ ಅಥವಾ ಅವರೇ ಸ್ವತಃ ಎಲ್ಲಾದರೂ ಹೋಗಿದ್ದಾರೋ ಎಂಬುದನ್ನು ಪತ್ತೆ ಹಚ್ಚಲು ತನಿಖೆ ನಡೆಸುತ್ತಿದ್ದಾರೆ.
ಸ್ಥಳೀಯ ಪೊಲೀಸರ ಪ್ರಕಾರ, ಮಹಾಲಿಂಗಂ ಅವರು ಜೂ.8ರಂದು ಬೆಳಿಗ್ಗೆ ವಾಕಿಂಗ್‌ಗೆ ತೆರಳಿದ ಮೇಲೆ ಹಿಂತಿರುಗಿಲ್ಲ. ಅದೇ ದಿನ ಕಾರವಾರದ ಮಲ್ಲಾಪುರ ಪೊಲೀಸ್ ಠಾಣೆಯಲ್ಲಿ ಅವರ ಪತ್ನಿ ಮಹಾಲಿಂಗಂ ಅವರ ಕಾಣೆಯ ಬಗ್ಗೆ ದೂರು ನೀಡಿದ್ದರು. |