ಚುನಾವಣೆಯಲ್ಲಿ ಎದುರಾದ ಅನಿರೀಕ್ಷಿತ ಆಘಾತದಿಂದ ಚೇತರಿಸಿಕೊಳ್ಳದ ಬಿಜೆಪಿಯೊಳಗೆ ಆಂತರಿಕ ಭಿನ್ನಾಭಿಪ್ರಾಯ ಮುಗಿಲೆತ್ತರಕ್ಕೆ ಬೆಳೆಯುತ್ತಿದ್ದು, ಪಕ್ಷದ ಚುನಾವಣಾ ಕಾರ್ಯತಂತ್ರದತ್ತಲೇ ಹಿರಿಯ ಮುಖಂಡರು ಬೆರಳು ತೋರಿಸುತ್ತಿರುವಂತೆಯೇ, ಬಿಜೆಪಿ ಪ್ರಧಾನಿ ಅಭ್ಯರ್ಥಿ ಎಲ್.ಕೆ.ಆಡ್ವಾಣಿ ಅವರ ರಾಜಕೀಯ ಸಲಹೆಗಾರ ಸುಧೀಂದ್ರ ಕುಲಕರ್ಣಿಯವರು ನೇತಾರರ ಕೆಂಗಣ್ಣಿಗೆ ಸಿಲುಕಿದ್ದಾರೆ.
ಮೇ 16ರವರೆಗೂ, ಪಕ್ಷದೊಳಗೆ ಏನೆಲ್ಲಾ ನಡೆಯುತ್ತಿತ್ತೋ, ಅದಕ್ಕೆಲ್ಲಾ ಸುಧೀಂದ್ರ ಕುಲಕರ್ಣಿ ಹೊಣೆಯಾಗಿದ್ದರು. ಆದರೆ ಮರುದಿನವೇ ಅವರು ದಿಢೀರ್ ಆಗಿ ಪತ್ರಕರ್ತರಾಗಿ ಪುನಃಪರಿವರ್ತಿತರಾಗಿದ್ದಾರೆ ಎಂದು, ಬಿಜೆಪಿಯ ಚುನಾವಣಾ ಪ್ರಚಾರವನ್ನು ಟೀಕಿಸಿ ನಿಯತಕಾಲಿಕವೊಂದರಲ್ಲಿ ಅಂಕಣ ಬರೆದಿದ್ದ ಕುಲಕರ್ಣಿಯವರನ್ನು ಉಲ್ಲೇಖಿಸಿ ಬಿಜೆಪಿ ವಕ್ತಾರ ರಾಜೀವ್ ಪ್ರತಾಪ್ ರೂಡಿ ಹೇಳಿದ್ದಾರೆ. ಅವರು ಪಕ್ಷಕ್ಕೆ ಸಲಹೆಗಾರನ ಸ್ಥಾನದಲ್ಲಿದ್ದರು. ಹೀಗಾಗಿ ಅವರ ಟೀಕೆಗಳು ಸ್ವೀಕಾರಯೋಗ್ಯವಲ್ಲ ಎಂದವರು ಹೇಳಿದ್ದಾರೆ.
ಚುನಾವಣಾ ಸೋಲಿಗೆ ಮುಕ್ತವಾಗಿ ಚರ್ಚಿಸಲೂ ಬಿಜೆಪಿ ವಿಫಲವಾಗಿರುವುದರಿಂದ ಪಕ್ಷದೊಳಗಿನ ಸದಸ್ಯರ ಭಿನ್ನಾಭಿಪ್ರಾಯಗಳು, ಮತಭೇದಗಳು ಒಂದೊಂದಾಗಿ ಹೊರಬರುತ್ತಿರುವ ಹಿನ್ನೆಲೆಯಲ್ಲಿ ಬಿಜೆಪಿಯ ಸದಸ್ಯರಲ್ಲದಿದ್ದರೂ ಆಡ್ವಾಣಿಗೆ ಆತ್ಮೀಯರಾಗಿದ್ದ ಕುಲಕರ್ಣಿ ಮೇಲಿನ ಟೀಕೆಯೂ ಮಹತ್ವ ಪಡೆದುಕೊಂಡಿದೆ. ಜೂನ್ 19ರಂದು ಬಿಜೆಪಿಯ ಎರಡು ದಿನಗಳ ರಾಷ್ಟ್ರೀಯ ಕಾರ್ಯಕಾರಿಣಿ ನಡೆಯಲಿದ್ದು, ಅದರಲ್ಲಿ ಚರ್ಚೆಯ ಕಾವು ಏರುವ ಸಾಧ್ಯತೆಗಳಿವೆ.
ಬಿಜೆಪಿ ಪ್ರಧಾನ ಕಾರ್ಯದರ್ಶಿ ಅರುಣ್ ಜೇಟ್ಲಿ ಅವರು ಕೂಡ ಸೋಲಿನ ಬಗ್ಗೆ ಮಾಧ್ಯಮದಲ್ಲಿ ಅಂಕಣ ಬರೆದಿದ್ದರೂ, ಅವರು ಯಾವುದೇ ನಿಯಮಾವಳಿಗಳನ್ನು ಉಲ್ಲಂಘಿಸಿಲ್ಲ, ಯಾವುದೇ ನಾಯಕರತ್ತ ಬೆರಳು ತೋರಿಸಿಲ್ಲ. ಅವರು ಚುನಾವಣಾ ಫಲಿತಾಂಶದ ವಿಶ್ಲೇಷಣೆಯನ್ನಷ್ಟೇ ನಡೆಸಿದ್ದಾರೆ ಎಂದು ರೂಡಿ ಹೇಳಿದ್ದಾರೆ.
ಬಿಜೆಪಿ ಹಿರಿಯ ಮುಖಂಡರಲ್ಲೊಬ್ಬರಾದ ಜಸ್ವಂತ್ ಸಿಂಗ್ ಅವರು ಆಡ್ವಾಣಿ ಹಾಗೂ ಅವರ ಸುತ್ತಮುತ್ತಲಿರುವ ನಾಯಕ ಗಡಣದ ಮೇಲೆ ಪರೋಕ್ಷ ವಾಗ್ದಾಳಿ ನಡೆಸಿರುವುದು ಭಿನ್ನಮತದ ವಾತಾವರಣವನ್ನು ಮತ್ತಷ್ಟು ಬಿಸಿಯಾಗಿಸಿದೆ. ಆದರೆ ರಾಜಸ್ಥಾನದವರಾಗಿಯೂ ಪಶ್ಚಿಮ ಬಂಗಾಳದಲ್ಲಿ ಚುನಾವಣೆ ಎದುರಿಸಿ ಗೆದ್ದುಕೊಂಡ ಹಿರಿಯ ಮುಖಂಡ ಜಸ್ವಂತ್ ಮೇಲೆ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ ಎಂದು ಪಕ್ಷವು ಈಗಾಗಲೇ ಸ್ಪಷ್ಟಪಡಿಸಿದೆ.
ಮತ್ತೊಂದೆಡೆ, ಪ್ರಸ್ತಾಪಿತ ಮಹಿಳಾ ಮೀಸಲಾತಿ ಮಸೂದೆ ಬಗ್ಗೆ ಪಕ್ಷದ ನಿಲುವಿಗೆ ಪ್ರತಿಯಾಗಿ ಬಹಿರಂಗವಾಗಿಯೇ ವಿರೋಧ ವ್ಯಕ್ತಪಡಿಸಿದ್ದ ಕಿರಿಯ ಮುಖಂಡ ವಿನಯ್ ಕಟಿಯಾರ್ ಅವರ ಹೇಳಿಕೆಯನ್ನೂ ಬಿಜೆಪಿ ನಿರ್ಲಕ್ಷಿಸಲು ನಿರ್ಧರಿಸಿದೆ.
ಮತ್ತೊಂದು ಕಡೆಯಿಂದ ಮಗದೊಬ್ಬ ಹಿರಿಯ ನೇತಾರ ಬೃಜೇಶ್ ಮಿಶ್ರಾ ಕೂಡ, ಬಿಜೆಪಿಯ ಚುನಾವಣಾ ಕಾರ್ಯತಂತ್ರವನ್ನು ಮತ್ತು ವರುಣ್ ಗಾಂಧಿ ಹೇಳಿಕೆಗಳ ಬಗ್ಗೆ ಪಕ್ಷ ತಳೆದ ನಿಲುವನ್ನು ಟೀಕಿಸಿ ಉರಿಯುವ ಬೆಂಕಿಗೆ ತುಪ್ಪ ಸುರಿದಿದ್ದರು. ಒಟ್ಟಿನಲ್ಲಿ ಜೂನ್ 19ರಂದು ನಡೆಯುವ ರಾಷ್ಟ್ರೀಯ ಕಾರ್ಯಕಾರಿಣಿಯತ್ತಲೇ ಎಲ್ಲರ ದೃಷ್ಟಿ ನೆಟ್ಟಿದೆ. |