ಲೋಕಸಭಾ ಚುನಾವಣೆ ಮುಗಿದ ನಂತರ ಇದೀಗ ಕಾಂಗ್ರೆಸ್‌ನ ಯುವ ಉತ್ಸಾಹಿ ನೇತಾರ ರಾಹುಲ್ ಗಾಂಧಿ ನೇತೃತ್ವದ ಯುವ ತಂಡ ಇದೀಗ ಉತ್ತರ ಪ್ರದೇಶದಲ್ಲಿ ಜಿಲ್ಲಾ ಹಾಗೂ ನಗರಗಳಲ್ಲಿ ಯುವ ಕಾಂಗ್ರೆಸ್ ಅಧ್ಯಕ್ಷರ ಹುಡುಕಾಟದಲ್ಲಿ ತೊಡಗಿದೆ.ಸೋಮವಾರದಿಂದ ಅಧಿಕೃತವಾಗಿ ಆಯ್ಕೆ ಪ್ರಕ್ರಿಯೆ ಆರಂಭವಾಗಲಿದ್ದು, ಸುಮಾರು 500 ಆಕಾಂಕ್ಷಿಗಳ ಅರ್ಜಿ ಬಂದಿವೆ. ಈ ಅರ್ಜಿಯಲ್ಲಿ ಯುವ ಎಂಬಿಎ ಪದವೀಧರರು, ಉಪನ್ಯಾಸಕರು, ಕಾರ್ಪೋರೇಟ್ ಉದ್ಯೋಗಿಗಳೂ ಸೇರಿದ್ದಾರೆ.ಆದರೆ ಕೇವಲ ಪದವಿಯೇ ಇದಕ್ಕೆ ಮಾನದಂಡವಲ್ಲ. ಆಸಕ್ತ ಅಭ್ಯರ್ಥಿಗಳು ತಮ್ಮ ಅರ್ಜಿಯ ಜತೆಗೆ ಮುಂದಿನ ಆರು ತಿಂಗಳ ಅವಧಿಯಲ್ಲಿ ತಾವು ಹಮ್ಮಿಕೊಳ್ಳುವ ಕಾರ್ಯಗಳ ವಿವರವನ್ನು ನೀಡಬೇಕು. ರಾಹುಲ್ ಗಾಂಧಿ ಈಗಾಗಲೇ ಗಂಭೀರವಾಗಿ ಈ ಬಗ್ಗೆ ರೂಪುರೇಷೆ ತಯಾರಿಸುತ್ತಿದ್ದು, ಜಿಲ್ಲಾ ಹಾಗೂ ನಗರ ಯುವ ಕಾಂಗ್ರೆಸ್ ಅಧ್ಯಕ್ಷರಾದವರು ರಾಹುಲ್ ಮಾರ್ಗದರ್ಶನದಲ್ಲಿ ನಡೆಯಬೇಕಿದೆ.ಆದರೆ ಈ ಆಯ್ಕೆಯಲ್ಲಿ ಕಾಂಗ್ರೆಸ್ ಜತೆಗಿನ ಹಳೆಯ ಸಂಬಂಧಗಳೆಲ್ಲ ಪ್ರಮುಖ ಆಯ್ಕೆಯ ಮಾನದಂಡವಾಗುವುದಿಲ್ಲ. ಯಾವುದೇ ರಾಜಕೀಯ ಹಿನ್ನೆಲೆಯಿಲ್ಲದಿದ್ದರೂ, ತುಂಬ ಚುರುಕುತನ, ವಿದ್ಯಾವಂತ, ಬುದ್ಧಿವಂತ ಹಾಗೂ ಸಮಾಜಕ್ಕಾಗೆ ಕೆಲಸ ಮಾಡುವ ಆಸಕ್ತಿ, ಉತ್ಸಾಹ ಇರುವ ವ್ಯಕ್ತಿಯನ್ನು ಆರಿಸಲಾಗುತ್ತದೆ ಎಂದು ಹಿರಿಯ ಯುವ ಕಾಂಗ್ರೆಸ್ ಮುಖಂಡರು ಹೇಳಿದ್ದಾರೆ. ಇದಕ್ಕಾಗಿಯೇ ಮುಂದಿನ ಆರು ತಿಂಗಳಲ್ಲಿ ನಡೆಸುವ ಕಾರ್ಯಗಳ ವಿವರಗಳನ್ನೂ ಅರ್ಜಿಗಳ ಜತೆಗೆ ನೀಡಲು ಹೇಳಿದ್ದೇವೆ ಎಂದು ಅವರು ವಿವರಿಸುತ್ತಾರೆ.500 ಕ್ಕೂ ಹೆಚ್ಚು ಅರ್ಜಿಗಳಲ್ಲಿ ಆಯ್ಕೆಯಾದ ಮಂದಿಗೆ ವಿಭಾಗೀಯ ಮಟ್ಟದ ಸಂದರ್ಶನ ಜೂ.17 ಹಾಗೂ ಜೂ.24ರಂದು ನಡೆಯಲಿದೆ. ಅಧ್ಯಕ್ಷರ ನೇಮಕಾತಿ ಪ್ರಕ್ರಿಯೆ ಈ ತಿಂಗಳಾಂತ್ಯದಲ್ಲಿ ಪೂರ್ಣಗೊಳ್ಳಲಿದೆ ಎಂದು ಉತ್ತರ ಪ್ರದೇಶ ಯುವ ಕಾಂಗ್ರೆಸ್‌ನ ಕೇಂದ್ರ ವಿಭಾಗದ ಅಧ್ಯಕ್ಷ ಪಂಕಜ್ ತಿವಾರಿ ಹೇಳಿದ್ದಾರೆ. |