ಶಿಸ್ತು ಉಲ್ಲಂಘಿಸಿ ತಮ್ಮ ಅಭಿಪ್ರಾಯಗಳನ್ನು ಬಹಿರಂಗವಾಗಿ ವ್ಯಕ್ತಪಡಿಸುವ ನಾಯಕರ ಮೇಲೆ ಕ್ರಮ ಕೈಗೊಳ್ಳುವುದಾಗಿ ಬಿಜೆಪಿ ಅಧ್ಯಕ್ಷ ರಾಜನಾಥ್ ಸಿಂಗ್ ಎಚ್ಚರಿಕೆ ನೀಡಿರುವಂತೆಯೇ, ಮಾಜಿ ಕೇಂದ್ರ ಸಚಿವ, ಹಿರಿಯ ನಾಯಕ ಯಶವಂತ್ ಸಿನ್ಹಾ ಅವರು ಉಪಾಧ್ಯಕ್ಷ ಹುದ್ದೆಗೆ ರಾಜೀನಾಮೆ ನೀಡಿದ್ದು, ಪಕ್ಷದೊಳಗಿನ ಆಂತರಿಕ ಬಿಕ್ಕಟ್ಟು ಶನಿವಾರ ಮತ್ತಷ್ಟು ಉಲ್ಬಣಗೊಂಡಿತು.ಉಪಾಧ್ಯಕ್ಷ ಪದವಿಯಲ್ಲದೆ, ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯತ್ವಕ್ಕೂ ಸಿನ್ಹಾ ರಾಜೀನಾಮೆ ನೀಡಿದ್ದಾರೆ. ತಮ್ಮ ಈ ನಿರ್ಧಾರವನ್ನು ರಾಜನಾಥ್ ಸಿಂಗ್‌ಗೆ ಪತ್ರದ ಮೂಲಕ ತಿಳಿಸಿರುವ ಸಿನ್ಹಾ, ಚುನಾವಣೋತ್ತರ ಕಾಲದಲ್ಲಿ ಪಕ್ಷವು ತೆಗೆದುಕೊಂಡಿರುವ ನಿರ್ಧಾರಗಳನ್ನು ಅದರಲ್ಲಿ ಪ್ರಶ್ನಿಸಿರುವುದಾಗಿ ಮೂಲಗಳು ತಿಳಿಸಿವೆ.ಚುನಾವಣೆಯ ಹೊಣೆ ಹೊತ್ತಿರುವ ಪ್ರಧಾನ ಕಾರ್ಯದರ್ಶಿ ಅರುಣ್ ಜೇಟ್ಲಿ ಅವರನ್ನು ಪರೋಕ್ಷವಾಗಿ ಉಲ್ಲೇಖಿಸಿ ಸಿನ್ಹಾ ಅವರು, ಕೆಲವೊಂದು ಚುನಾವಣಾ ಮ್ಯಾನೇಜರ್‌ಗಳ ವಿರುದ್ಧ ಧ್ವನಿ ಎತ್ತಿರುವುದಾಗಿ ಹೇಳಲಾಗಿದೆ.ಪಕ್ಷದ ಹಿರಿಯ ಮುಖಂಡ ಎಲ್.ಕೆ.ಆಡ್ವಾಣಿ ಹಾಗೂ ರಾಜನಾಥ್ ಸಿಂಗ್ ಜೊತೆಗಿನ ಸಿನ್ಹಾ ಸಂಬಂಧ ಹಿಂದೆಯೇ ಹಳಸಿತ್ತು. ಇತ್ತೀಚಿನ ಮಹಾ ಚುನಾವಣೆಯಲ್ಲಿ ಹಜಾರಿಭಾಗ್ ಕ್ಷೇತ್ರದಿಂದ ಆಯ್ಕೆಯಾಗಿದ್ದ ಸಿನ್ಹಾ ಅವರು, ಇತ್ತೀಚೆಗೆ ಪಕ್ಷದ ಸಂಸದೀಯ ಮಂಡಳಿಗೆ ಆಡ್ವಾಣಿ ಮಾಡಿದ ಕೆಲವೊಂದು ನೇಮಕಾತಿಗಳಿಂದ ರೋಸಿ ಹೋಗಿದ್ದರೆಂದು ತಿಳಿದುಬಂದಿದೆ.ಇದರೊಂದಿಗೆ, ಚುನಾವಣೆಯಲ್ಲಿ ತೀವ್ರ ಹಿನ್ನಡೆ ಅನುಭವಿಸಿದ ಬಿಜೆಪಿಯೊಳಗಿನ ಆಂತರಿಕ ಕಚ್ಚಾಟ ಮತ್ತಷ್ಟು ಕಾವು ಪಡೆದುಕೊಂಡಿದೆ.ಕ್ಲಿಕ್: ಬಲಿಪಶು ಹುಡುಕಾಟದಲ್ಲಿ ನಲುಗುತ್ತಿರುವ ಬಿಜೆಪಿ |