ಆಸ್ಟ್ರೇಲಿಯಾದಲ್ಲಿ ಹೆಚ್ಚುತ್ತಿರುವ ಭಾರತೀಯ ವಿದ್ಯಾರ್ಥಿಗಳ ಮೇಲಿನ ಹಲ್ಲೆ ಪ್ರಕರಣಗಳ ಕಾರಣದಿಂದ ಇದೀಗ ಭಾರತ ಆಸ್ಟ್ರೇಲಿಯಾದಲ್ಲಿ ಮುಂದೆ ಓದಲಿಚ್ಛಿಸುವ ವಿದ್ಯಾರ್ಥಿಗಳಿಗೆ ವಿಶೇಷ ನಿಯಮಾವಳಿಗಳನ್ನು ರೂಪಿಸಿದ್ದು, ಕೂಡಲೇ ವಿದ್ಯಾರ್ಥಿಗಳು ಭಾರತೀಯ ಹೈಕಮಿಷನ್ ಅಥವಾ ಕಾನ್ಸುಲೇಟ್‌ನಲ್ಲಿ ಹೆಸರು ನೊಂದಾಯಿಸಬೇಕಾಗಿದೆ.
ಜತೆಗೆ ಆಸ್ಟ್ರೇಲಿಯಾ ಸರ್ಕಾರ ಮುಂದೆ ಇಂತಹ ಯಾವುದೇ ಘಟನೆಗಳ ನಡೆಯುವುದಿಲ್ಲ ಎಂದು ಭಾರತಕ್ಕೆ ಭರವಸೆ ನೀಡಬೇಕು ಎಂದೂ ಭಾರತ ಹೇಳಿದೆ.
ವಿದೇಶಾಂಗ ಇಲಾಖೆಯ ಕಾರ್ಯದರ್ಶಿ ಶಿವಶಂಕರ್ ಮೆನನ್ ಹೇಳುವಂತೆ, ಆಸ್ಟ್ರೇಲಿಯಾದಲ್ಲಿ ಪದೇ ಪದೇ ಭಾರತೀಯ ವಿದ್ಯಾರ್ಥಿಗಳೇ ಹಲ್ಲೆಗೆ ಗುರಿಯಾಗುತ್ತಿರುವುದು ಭೀಕರ ವಿಚಾರ. ಪ್ರಮುಖವಾಗಿ ಆಸ್ಟ್ರೇಲಿಯಾ ಸರ್ಕಾರ ಇವುಗಳನ್ನು ಹತೋಟಿಗೆ ತರಲೇಬೇಕು. ಮುಂದೆ ಹೀಗಾಗದಂತೆ ಕಾಪಾಡುವಲ್ಲಿ ಭಾರತ ಸರ್ಕಾರ ಯಶಸ್ವಿಯಾಗಿ ಕಾರ್ಯ ನಿರ್ವಹಿಸಲಿದೆ ಎಂದರು.
ಆದರೆ ಆಸ್ಟ್ರೇಲಿಯಾಕ್ಕೆ ಪ್ರಯಾಣಿಸುವುದನ್ನೇ ರದ್ದು ಮಾಡುವ ಚಿಂತನೆ ಇದೆಯೇ ಎಂಬುದಕ್ಕೆ ಉತ್ತರಿಸಿದ ಮೆನನ್, ಪ್ರಯಾಣವನ್ನೇ ರದ್ದು ಮಾಡುವಂಥ ವಿಚಾರಗಳು ಈವರೆಗೆ ಬಂದಿಲ್ಲ. ಆಸ್ಟ್ರೇಲಿಯಾದಲ್ಲಿರುವ ಭಾರತೀಯರ ಸಂಖ್ಯೆ ಹಾಗೂ ಹಲ್ಲೆಗೊಳಗಾಗವರ ಸಂಖ್ಯೆಯನ್ನು ಮೊದಲು ಪರಿಗಣಿಸಬೇಕು. ಆಗ ನಿಜವಾಗಿಯೂ ಆಸ್ಟ್ರೇಲಿಯಾದಲ್ಲಿರುವ ಎಲ್ಲ ಭಾರತೀಯರೂ ಭಯ ಎದುರಿಸುತ್ತಿದ್ದಾರೆಯೇ ಎಂಬುದನ್ನು ಪತ್ತೆಹಚ್ಚಬೇಕು. ಅಲ್ಲಿವರೆಗೆ ರದ್ದಿನ ಪ್ರಶ್ನೆ ಬರುವುದಿಲ್ಲ ಎಂದು ಮೆನನ್ ವಿವರಿಸಿದರು.
ಸದ್ಯಕ್ಕೆ ವಿದೇಶದಲ್ಲಿ ಕಲಿಯುವ ಭಾರತೀಯ ವಿದ್ಯಾರ್ಥಿಗಳ ಯಾವುದೇ ವಿವರಗಳೂ ದಾಖಲಾಗಿಲ್ಲ. ಇಂತಹ ಘಟನೆಗಳು ನಡೆಯುತ್ತಿರುವುದರಿಂದ ವಿದ್ಯಾರ್ಥಿಗಳೇ ಇನ್ನು ಮುಂದೆ ತಮ್ಮ ವಿವರಗಳನ್ನು ದಾಖಲಿಸುವ ನಿಯಮಗಳನ್ನು ರೂಪಿಸಲಾಗುತ್ತದೆ. ಪ್ರತಿಯೊಬ್ಬ ವಿದ್ಯಾರ್ಥಿಯ ವಿಳಾಸ, ವಿವರಗಳನ್ನು ಪಡೆಯುವುದು ಅಗತ್ಯ ಎಂದು ಈಗನಿಸಿದೆ. ಆ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುತ್ತದೆ. ಆನ್‌ಲೈನ್ ಮೂಲಕವೇ ಭಾರತೀಯ ವಿದ್ಯಾರ್ಥಿಗಳು ತಮ್ಮ ವಿವರಗಳನ್ನು ದಾಖಲಿಸುವ ಸೌಲಭ್ಯ ಕಲ್ಪಿಸಲಾಗುತ್ತದೆ ಎಂದು ಮೆನನ್ ತಿಳಿಸಿದರು.
ಸದ್ಯ ಭಾರತೀಯ ವಿದೇಶಾಗ ವ್ಯವಹಾರಗಳ ಸಚಿವಾಲಯ ಮೂರು ವಿಭಾಗಗಳಲ್ಲಿ ನಿಯಮಾವಳಿಗಳನ್ನು ರೂಪಿಸಿದೆ. ಆಸ್ಟ್ರೇಲಿಯಾದಿಂದ ಹೊರಬರುವ, ಆಸ್ಟ್ರೇಲಿಯಾಕ್ಕೆ ಪ್ರಯಾಣಿಸುವ ಹಾಗೂ ಆಸ್ಟ್ರೇಲಿಯಾದಲ್ಲಿರುವ ಎಂಬ ಮೂರು ವಿಭಾಗಗಳಿಗೆ ಈ ನಿಯಮಾವಳಿಗಳು ಪ್ರತ್ಯೇಕವಾಗಿ ಅನ್ವಯಿಸಲಿವೆ. |