ಭಯೋತ್ಪಾದನೆ, ತೀವ್ರವಾದ ಮತ್ತು ಈಶಾನ್ಯದಲ್ಲಿನ ಪ್ರತ್ಯೇಕತಾ ವಾದ- ಇವು ಮೂರು ಭಾರತದ ಮುಂದಿರುವ ಪ್ರಮುಖ ಸವಾಲುಗಳು ಎಂದು ಕೇಂದ್ರ ಗೃಹ ಸಚಿವ ಪಿ.ಚಿದಂಬರಂ ಅಭಿಪ್ರಾಯಪಟ್ಟಿದ್ದಾರೆ.
ಚೆನ್ನೈಯಲ್ಲಿ ಶನಿವಾರ ರಾಜ್ಯ ಕಾಂಗ್ರೆಸ್‌ನಿಂದ ಸನ್ಮಾನ ಸ್ವೀಕರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭಯೋತ್ಪಾದನೆ ಪ್ರಧಾನ ಸವಾಲಾಗಿದ್ದು, ಅದರ ಬಗ್ಗೆ ಕೇಂದ್ರವು 'ಶೂನ್ಯ ಸೈರಣೆ' ನೀತಿ ಪ್ರದರ್ಶಿಸಲಿದೆ. ಪೂರ್ಣ ಬಲ ಪ್ರಯೋಗಿಸಿ ಸರಕಾರವು ಈ ವ್ಯಾಧಿಯನ್ನು ಹತ್ತಿಕ್ಕಲಿದೆ ಎಂದು ಚಿದಂಬರಂ ಹೇಳಿದರು.
ನಕ್ಸಲ್‌ವಾದಕ್ಕೆ ಬಡತನವೇ ಮೂಲ ಕಾರಣವೇ ಎಂದು ಪ್ರಶ್ನಿಸಿದಾಗ, ಬಡತನ ಎಲ್ಲೆಲ್ಲೂ ಇರುವುದರಿಂದ ಈ ವಾದವನ್ನು ತಾನು ಒಪ್ಪುವುದಿಲ್ಲ ಎಂದರು.
ಶ್ರೀಲಂಕಾ ಪರಿಸ್ಥಿತಿ ಕುರಿತು ಮಾತನಾಡಿ ಚಿದಂಬರಂ, ತಮಿಳು ನಿರಾಶ್ರಿತರಿಗೆ ಪುನರ್ವಸತಿ ಕಲ್ಪಿಸುವ ಬಗ್ಗೆ ಲಂಕಾ ಅಧ್ಯಕ್ಷ ಮಹಿಂದಾ ರಾಜಪಕ್ಷೆ ಕ್ರಮ ಕೈಗೊಳ್ಳುವರು ಮತ್ತು ಅಲ್ಪಸಂಖ್ಯಾತ ತಮಿಳರಿಗೆ ಸಮಾನ ಹಕ್ಕುಗಳನ್ನು ನೀಡುವರೆಂಬ ವಿಶ್ವಾಸ ವ್ಯಕ್ತಪಡಿಸಿದರು. |