ಕೈಗಾ ಪರಮಾಣು ಸ್ಥಾವರದ ವಿಜ್ಞಾನಿ ಎನ್. ಮಹಾಲಿಂಗಂ ಅವರ ಮೃತದೇಹವನ್ನು ನೌಕಾ ಈಜುಗಾರರು ಕಾಳಿನದಿಯಲ್ಲಿ ಪತ್ತೆಮಾಡಿದ್ದು, ವಿಜ್ಞಾನಿ ಕಣ್ಮರೆ ಕುರಿತ ನಿಗೂಢತೆಗೆ ತೆರೆಬಿದ್ದಿದೆ. ಜೂ.8ರಂದು ಬೆಳಗಿನ ವಾಯುವಿಹಾರಕ್ಕೆ ತೆರಳಿದ್ದ ಮಹಾಲಿಂಗಂ ನಾಪತ್ತೆಯಾಗಿದ್ದಾರೆಂದು ವರದಿಯಾಗಿತ್ತು, ಕಳೆದ 6 ದಿನಗಳಿಂದ ನಾಪತ್ತೆಯಾಗಿದ್ದ ಮಹಾಲಿಂಗಂ ದೇಹವನ್ನು ಕೈಗಾ ಉಪನಗರದ ಬಳಿ ಹರಿಯುವ ಕಾಳಿ ನದಿಯಿಂದ ಹೊರತೆಗೆಯಲಾಯಿತು.
ಮಹಾಲಿಂಗಂ ಮುಳುಗಿ ಸತ್ತಿದ್ದಾರೆಯೇ ಅಥವಾ ಯಾವುದೇ ದುಷ್ಕೃತ್ಯವಿದೆಯೇ ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಕೆಲವಾರು ದಿನಗಳಿಂದ ಮಹಾಲಿಂಗಂ ಕಣ್ಮರೆಯ ನಿಗೂಢತೆ ಬಯಲುಮಾಡಲು ಕಾರವಾರದ ಸೀಬರ್ಡ್ ನೌಕಾನೆಲೆಯಿಂದ ಐವರು ನುರಿತ ಈಜುಗಾರರ ನೆರವನ್ನು ಅಧಿಕಾರಿಗಳು ಪಡೆದು ಶೋಧ ಕಾರ್ಯಾಚರಣೆ ಆರಂಭಿಸಿದರು. ಕೈಗಾ ಉತ್ಪಾದನೆ ಕೇಂದ್ರದ ವಿಜ್ಞಾನಿಯನ್ನು ಪತ್ತೆಹಚ್ಚಲು ಗುಪ್ತಚರ ಅಧಿಕಾರಿಗಳ ಜತೆ ಸಿಐಎಸ್‌ಎಫ್ ಮತ್ತು ಸ್ಥಳೀಯ ಪೊಲೀಸರು ಶೋಧ ಕಾರ್ಯಾಚರಣೆಯನ್ನು ತೀವ್ರಗೊಳಿಸಿದರು.
ಸ್ಥಳೀಯ ಈಜುಗಾರರ ಶೋಧ ಪ್ರಯತ್ನ ನಿಷ್ಫಲವಾದ್ದರಿಂದ ನೌಕಾ ಈಜುಗಾರರನ್ನು ಸೇವೆಗೆ ಬಳಸಿಕೊಳ್ಳಲಾಯಿತು.ಸಿಐಎಸ್‌ಎಫ್ ಸಿಬ್ಬಂದಿ, ಜಿಲ್ಲಾ ಪೊಲೀಸರು ಮತ್ತು ಅರಣ್ಯ ಇಲಾಖೆ ಜಂಟಿ ಕಾರ್ಯಾಚರಣೆ ತೀವ್ರಗೊಳಿಸಿ ನದಿಯಲ್ಲಿ ದೇಹವನ್ನು ಪತ್ತೆ ಹಚ್ಚುವ ಮುಂಚೆ ಕೈಗಾ ಅರಣ್ಯದಲ್ಲಿ ಶೋಧ ನಡೆಸಿದ್ದರು. ಕೈಗಾ ಪರಮಾಣು ಸ್ಥಾವರದ ಅಧಿಕಾರಿಗಳು ಮತ್ತು ಅವರ ಕುಟುಂಬದವರು ದೇಹವನ್ನು ಗುರುತಿಸಿದ್ದು ಮಹಾಲಿಂಗಂ ದೇಹವನ್ನು ದೃಢಪಡಿಸಿದರು.
ಸ್ಥಳೀಯ ಈಜುಗಾರರು ಕಾಳಿ ನದಿಯ 35-40 ಕಿಮೀ ವ್ಯಾಪ್ತಿಯಲ್ಲಿ ಶೋಧಿಸಿದರು.ಮಹಾಲಿಂಗಂ ಕಣ್ಮರೆಯಿಂದ ಆತಂಕ ಮೂಡಿದ್ದರಿಂದ ವಿಜ್ಞಾನಿಯ ಸುಪರ್ದಿಯಲ್ಲಿ ಸೂಕ್ಷ್ಮ ದಾಖಲೆಗಳು ಇರಲಿಲ್ಲವೆಂದು ಎನ್‌ಪಿಸಿಐಎಲ್ ಅಧಿಕಾರಿಗಳು ಸ್ಪಷ್ಟಪಡಿಸಿದ್ದರು. ಅಧಿಕಾರಿಗಳ ಪ್ರಕಾರ, ಮಹಾಲಿಂಗಂ ನಾಪತ್ತೆಯಾಗಿದ್ದು ಇದು ಎರಡನೇ ಬಾರಿಯಾಗಿದ್ದು, ಕಲ್ಪಾಕಂ ಪರಮಾಣು ಸ್ಥಾವರದಲ್ಲಿ ಕೆಲಸ ಮಾಡುವಾಗ ಕೆಲವು ದಿನಗಳವರೆಗೆ ಕಾಣೆಯಾಗಿ ಬಳಿಕ ಮನೆಗೆ ಮರಳಿದ್ದರು. |