ಹರ್ಯಾಣದ ಮಾಜಿ ಉಪಮುಖ್ಯಮಂತ್ರಿ ಚಂದರ್ ಮೋಹನ್ ಅಲಿಯಾಸ್ ಚಾಂದ್ ಮೊಹಮದ್ ಮತ್ತು ಪರಿತ್ಯಕ್ತ ಪ್ರೇಯಸಿ-ಪತ್ನಿ ಅನುರಾಧಾ ಬಾಲಿ ಯಾನೆ ಫಿಜಾ ನಡುವಣ ಪ್ರಕರಣ ಮತ್ತೊಂದು ತಿರುವು ಪಡೆದುಕೊಂಡಿದೆ. ಫಿಜಾಳ ಮನೆಗೆ ಮರಳಿದ ಚಾಂದ್, ಆಕೆಯ ಬಳಿ ಕ್ಷಮೆ ಯಾಚಿಸಿದ್ದಾರೆ, ಅವರಿಬ್ಬರೂ ಮತ್ತೆ ಒಂದಾಗಿದ್ದಾರೆಂಬ ವರದಿಗಳ ನಡುವೆಯೇ, ಚಾಂದ್‌ನನ್ನು ಫಿಜಾ ಮನೆಯಿಂದ ಅಪಹರಿಸುವ ಪ್ರಯತ್ನ ನಡೆದಿದೆ.ಫಿಜಾಳ ಮನೆಯಲ್ಲಿದ್ದ ಚಾಂದ್‌ನನ್ನು ಸುಮಾರು 100 ಮಂದಿಯ ತಂಡವೊಂದು ಅಪಹರಿಸಲು ಯತ್ನಿಸಿತು ಎಂದು ಮೊಹಾಲಿ ಪೊಲೀಸರು ತಿಳಿಸಿದ್ದಾರೆ.ಪೊಲೀಸರು ಅಲ್ಲಿಗೆ ಧಾವಿಸಿದಾಗ, ನೆರೆದಿದ್ದ ಗುಂಪು ಪೊಲೀಸರ ಮೇಲೂ ದಾಳಿ ಮಾಡಿತು. ರಕ್ಷಣೆಗಾಗಿ ಪೊಲೀಸರು ಗುಂಡು ಹಾರಿಸಬೇಕಾಯಿತು ಎಂದು ಎಎಸ್ಐ ಸೋಹನ್ ಸಿಂಗ್ ತಿಳಿಸಿದ್ದಾರೆ. ಈ ಚಕಮಕಿ ಸಂದರ್ಭ ಇಬ್ಬರು ಪೊಲೀಸರು ಹಾಗೂ ಹಿಸಾರ್‌ನ ಅಶೋಕ್ ಕುಮಾರ್ ಎಂಬಾತ ಗಾಯಗೊಂಡಿದ್ದಾರೆ.ಆಪಾದಿತ ಅಪಹರಣಕಾರರು ಬಳಸಿದ್ದ ವಾಹನವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಇದಕ್ಕೆ ಮೊದಲು, ಫಿಜಾ ಮನೆಯೆದುರು ಶಿವಸೇನಾ ಸದಸ್ಯರು ಪ್ರತಿಭಟನಾ ಪ್ರದರ್ಶನ ಮಾಡುತ್ತಿದ್ದರು.ಮತ್ತೆ ಒಂದಾದ ಪ್ರೇಮಿಗಳು:ಚಾಂದ್-ಫಿಜಾ ಮುಗಿಯದ ಸರಸ-ವಿರಸ ಪ್ರಕರಣಕ್ಕೆ ಭಾನುವಾರ ದೊರೆತ ಮತ್ತೊಂದು ತಿರುವಿನಲ್ಲಿ, ತಿಂಗಳುಗಳ ಹಿಂದೆ ವಿಚ್ಛೇದನ ನೀಡಿರುವುದಾಗಿ ಹೇಳಿಕೆ ನೀಡಿದ್ದ ಚಾಂದ್, ತನ್ನ 'ಪರಿತ್ಯಕ್ತ' ಪತ್ನಿಯ ಮನೆಗೆ ಬಂದು, ಹಿಂದಿನೆಲ್ಲಾ ತಪ್ಪುಗಳಿಗೆ ಕ್ಷಮೆ ಯಾಚಿಸಿದ್ದರು. ಆದರೆ ಫಿಜಾ ತಾನು ಆತನನ್ನು ಕ್ಷಮಿಸಿರುವುದಾಗಿನ ವರದಿಗಳನ್ನು ತಳ್ಳಿ ಹಾಕಲಿಲ್ಲ ಮತ್ತು ಕ್ಷಮಿಸಿದ್ದೇನೆ ಎಂದು ನೇರವಾಗಿ ಹೇಳಲೂ ಇಲ್ಲ.ಅನುರಾಧ ಬಾಲಿಯನ್ನು ಪ್ರೇಮಿಸಿ ವಿವಾಹವಾಗುವ ನಿಟ್ಟಿನಲ್ಲಿ ತನ್ನ ಮೊದಲ ಪತ್ನಿಯನ್ನು ತೊರೆದಿದ್ದ ಚಂದ್ರಮೋಹನ್, ಬಾಲಿ ಜೊತೆಗೆ ಇಸ್ಲಾಂ ಧರ್ಮಕ್ಕೆ ಮತಾಂತರ ಹೊಂದಿದ್ದರು. ಅವರಿಬ್ಬರ ಸಂಬಂಧದಲ್ಲಿ ಬಿರುಕು ಕಾಣಿಸಿಕೊಂಡಿದ್ದು, ಇಬ್ಬರೂ ತಲಾಕ್ ಮಾಡಿಕೊಂಡಿದ್ದರು. ತನ್ನ ಜೀವನ ಹಾಳು ಮಾಡಿದ ಚಾಂದ್‌ನನ್ನು ಸರ್ವನಾಶ ಮಾಡದೆ ವಿರಮಿಸುವುದಿಲ್ಲ ಎಂದು ಫಿಜಾ ಪ್ರತಿಜ್ಞೆಯನ್ನೂ ಮಾಡಿದ್ದಳು.ಫಿಜಾಳೊಂದಿಗೆ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಚಾಂದ್, ನಾನು ಎರಡು ಬಾರಿ ಮಾತ್ರವೇ ತಲಾಕ್ ಅಂತ ಹೇಳಿದ್ದೆ, ಮೂರು ಬಾರಿ ಅಲ್ಲ. ಹೀಗಾಗಿ ವಿಚ್ಛೇದನ ಆಗಿಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ.ಆದರೆ, ತಾನು ತನ್ನ ತಾಯಿ ಮತ್ತು ಕುಟುಂಬ ಸದಸ್ಯರೊಂದಿಗೆ ಚರ್ಚಿಸಿ ಮುಂದಿನ ನಿರ್ಧಾರ ಪ್ರಕಟಿಸುವುದಾಗಿ ಫಿಜಾ ಹೇಳಿದ್ದರು.ಚಾಂದ್ ನಮ್ಮ ಮನೆಗೆ ಕ್ಷಮೆ ಯಾಚಿಸಿದ್ದಾರೆ. ಶನಿವಾರದಿಂದಲೂ ಆತ ನನ್ನ ಮೊಬೈಲ್ ಫೋನಿಗೆ ಕರೆ ಮಾಡುತ್ತಲೇ ಇದ್ದರು. ಆದರೆ ನಾನೇ ತಪ್ಪಿಸಿಕೊಳ್ಳುತ್ತಿದ್ದೆ. ಚಂದ್ರಮೋಹನ್ ನಮ್ಮ ಮನೆಗೆ ಬಂದು ನಂತರ ನನ್ನ ತಾಯಿ ಜೊತೆ ಮಾತನಾಡಿದರು. ನಾವಿಬ್ಬರೂ ಸುದೀರ್ಘ ಕಾಲ ಚರ್ಚಿಸಿದೆವು, ಆತ ಕ್ಷಮೆ ಯಾಚಿಸಿದರು ಎಂದು ಫಿಜಾ ಹೇಳಿದರು.ನನ್ನ ಕುಟುಂಬಿಕರೂ ನನ್ನಿಂದ ದೂರವಾಗಿದ್ದಾರೆ. ನಾನೀಗ ಫಿಜಾಳ ಜೊತೆಗೇ ಇರುತ್ತೇನೆ. ಈ ಹಿಂದೆ ಫಿಜಾ ಬಗ್ಗೆ ಏನೆಲ್ಲಾ ಹೇಳಿದ್ದೇನೆಯೋ ಅದೆಲ್ಲಾ ಒತ್ತಡದಿಂದಾಗಿ ಎಂದು ಚಂದ್ರಮೋಹನ್ ಕೂಡ ಸ್ಪಷ್ಟಪಡಿಸಿದ್ದರು. |