ರೈಲಿನಲ್ಲಿ ನೀಡಲಾಗುವ ಆಹಾರದ ಗುಣಮಟ್ಟ ಹೆಚ್ಚಿಸಲು ಹಾಗೂ ರೈಲು ನಿಲ್ದಾಣಗಳಲ್ಲಿ ಬಡವರಿಗೆ ಕಡಿಮೆ ಬೆಲೆಯಲ್ಲಿ ಆಹಾರ ಲಭ್ಯವಾಗುವಂತೆ ಮಾಡಲು ರೈಲ್ವೇ ಸಚಿವೆ ಮಮತಾ ಬ್ಯಾನರ್ಜಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ.ರೈಲುಗಳಲ್ಲಿ ನೀಡಲಾಗುತ್ತಿರುವ ಆಹಾರದ ಗುಣಮಟ್ಟ ಕುಸಿತಗೊಂಡಿದ್ದು, ಅದನ್ನು ಸುಧಾರಿಸುವ ಅವಶ್ಯಕತೆ ಇದೆ ಎಂಬುದಾಗಿ ಹೌರಾ ಮತ್ತು ದಿಗಾ ನಡುವೆ ಖಾಂದಾರಿ ಎಕ್ಸ್‍ಪ್ರೆಸ್ ರೈಲನ್ನು ಉದ್ಘಾಟಿಸುತ್ತಾ ಮಮತಾ ಹೇಳಿದ್ದಾರೆ.ಇದೇವೇಳೆ ಶುಚಿತ್ವದ ಮಟ್ಟವೂ ಕುಸಿತಗೊಳ್ಳುತ್ತಿದ್ದು ಇದನ್ನು ಸುಧಾರಿಸುವ ಅಗತ್ಯವಿದೆ ಎಂದು ಮಮತಾ ಹೇಳಿದ್ದಾರೆ.ತತ್ಕಾಲ್ ಸೇವೆಯು ಸರಿಯಾಗಿ ಕಾರ್ಯಾಚರಿಸುತ್ತಿಲ್ಲ ಎಂದು ಬೆಟ್ಟು ಮಾಡಿದ ಅವರು ಜನರು ಈ ಸೇವೆಯ ಮೂಲಕ ಟಿಕೆಟ್‌ಗಳನ್ನು ಪಡೆಯುತ್ತಿಲ್ಲ ಮತ್ತು ಇದನ್ನೂ ಸರಿಪಡಿಸುವ ಅಗತ್ಯವಿದೆ ಎಂದು ಹೇಳಿದ್ದಾರೆ.ಇದೇ ವೇಳೆ ರೈಲ್ವೇ ಕೇಟರಿಂಗ್ ಆಂಡ್ ಟೂರಿಸಂ ಕಾರ್ಪೋರೇಶನ್ ಅನ್ನು ಟೀಕಿಸಿದ ಅವರು ಇದು ವಿಧಿಸುತ್ತಿರುವ ದರಗಳಿಂದಾಗಿ ಬಡಜನತೆ ಈ ಆಹಾರವನ್ನು ಖರೀದಿಸಲು ಸಾಧ್ಯವಿಲ್ಲ ಎಂದು ಹೇಳಿದರು.ಪೂರ್ವ, ದಕ್ಷಿಣ ಹಾಗೂ ಮೆಟ್ರೋ ರೈಲ್ವೇಯ ಜನರಲ್ ಮ್ಯಾನೇಜರುಗಳು ಭಾಗವಹಿಸಿದ್ದ ಸಭೆಯಲ್ಲಿ 'ಜಂತಾ ಖಾನಾ' (ಕಡಿಮೆ ಬೆಲೆಯ ಆಹಾರ) ಎಲ್ಲಾ ರೈಲ್ವೇ ನಿಲ್ದಾಣಗಳಲ್ಲೂ ಬಡವರಿಗೆ ದೊರೆಯುವಂತಾಗಬೇಕು ಎಂದು ಅವರು ಹೇಳಿದರು.ಇದೇವೇಳೆ ರೈಲ್ವೇ ಮೂಲಸೌಲಭ್ಯ, ಪ್ರಯಾಣಿಕರ ಸೌಲಭ್ಯ, ಸರಕ್ಷತೆ ಮತ್ತು ಭದ್ರತೆಯನ್ನು ಹೆಚ್ಚಿಸುವ ಅವಶ್ಯಕತೆ ಇದೆ ಎಂದು ಮಮತಾ ಹೇಳಿದ್ದಾರೆ. |