ರಶ್ಯಾಗೆ ಮೂರುದಿನಗಳ ಭೇಟಿನೀಡುತ್ತಿರುವ ಪ್ರಧಾನಿ ಮನಮೋಹನ್ ಸಿಂಗ್ ಅವರು ಪಾಕಿಸ್ತಾನಿ ಅಧ್ಯಕ್ಷ ಅಸಿಫ್ ಅಲಿ ಜರ್ದಾರಿ ಅವರನ್ನು ಭೇಟಿಮಾಡಲಿದ್ದಾರೆ. ಇದಲ್ಲದೆ ಪ್ರಧಾನಿ ಸಿಂಗ್ ಎರಡು ಬುಹುಪಕ್ಷೀಯ ಶೃಂಗ ಸಭೆಗಳಲ್ಲಿ ಭಾಗವಹಿಸಲಿದ್ದಾರೆ. ಕಳೆದ ನವೆಂಬರ್ 26ರಂದು ನಡೆದ ಮುಂಬೈ ದಾಳಿ ಬಳಿಕ ಇದು ಭಾರತ ಮತ್ತು ಪಾಕಿಸ್ತಾನದ ನಡುವಿನ ಉನ್ನತ ಮಟ್ಟದ ಸಂಪರ್ಕವಾಗಿದೆ.
ಎರಡನೆ ಬಾರಿಗೆ ಅಧಿಕಾರ ವಹಿಸಿರುವ ಪ್ರಧಾನಿ ಮನಮೋಹನ್ ಸಿಂಗ್ ಅವರ ಪ್ರಥಮ ಅಂತಾರಾಷ್ಟ್ರೀಯ ಭೇಟಿ ಇದಾಗಿದ್ದು, ರಷ್ಯಾದ ಯೆಕಟೆರಿನ್‌ಬರ್ಗ್ ನಗರಕ್ಕೆ ಮಂಗಳವಾರ ಭೇಟಿ ನೀಡಲಿದ್ದು, ಶಾಂಘೈ ಸಹಕಾರಿ ಸಂಘಟನೆ (ಎಸ್‌ಸಿಒ) ಹಾಗೂ ಬ್ರೆಜಿಲ್-ರಶ್ಯಾ-ಭಾರತ-ಚೀನ(ಬ್ರಿಕ್) ಸಮ್ಮೇಳನಗಳಲ್ಲಿ ಭಾಗವಹಿಸಲಿದ್ದಾರೆ. ಜಾಗತಿಕ ಆರ್ಥಿಕ ಬಿಕ್ಕಟ್ಟು, ಭಯೋತ್ಪಾದನೆ ಮತ್ತು ಆಹಾರ ಭದ್ರತೆ ಸೇರಿದಂತೆ ಇತರ ವಿಚಾರಗಳನ್ನು ಶೃಂಗಸಭೆಯಲ್ಲಿ ಚರ್ಚಿಸಲಾಗುವುದು ಎನ್ನಲಾಗಿದೆ.
ಈ ಶೃಂಗಸಭೆಗಳ ಪಾರ್ಶ್ವದಲ್ಲಿ ಮನಮೋಹನ್ ಸಿಂಗ್ ಅವರು ಪಾಕ್ ಅಧ್ಯಕ್ಷ ಜರ್ದಾರಿ ಅವರೊಂದಿಗೆ ಮಾತುಕತೆ ನಡೆಸಲಿದ್ದಾರೆ. ಇದೊಂದು ಅನೌಪಚಾರಿಕ ಮಾತುಕತೆಯಾಗಿದ್ದು ಯಾವುದೇ ನಿರ್ದಿಷ್ಟ ಕಾರ್ಯಸೂಚಿ ಇಲ್ಲದೇ ಇದ್ದರೂ ಉಭಯ ನಾಯಕರು, ದ್ವಿಪಕ್ಷೀಯ ವಿಚಾರಗಳ ಕುರಿತು ಮಾತುಕತೆ ನಡೆಸಲಿದ್ದು, ಇದು ನನೆಗುದ್ದಿಗೆ ಬಿದ್ದಿರುವ ದ್ವಿಪಕ್ಷೀಯ ಮಾತುಕತೆಗಳ ಮುಂದುವರಿಕೆಗೆ ನಾಂದಿಯಾಗಬಹುದು ಎಂದು ಹೇಳಲಾಗಿದೆ. |