ಏಸು ಕ್ರಿಸ್ತನ ಹೆಸರಿನಲ್ಲಿ ಜನರನ್ನು ವಂಚಿಸುತ್ತಿದ್ದ ದಂಪತಿಗಳನ್ನು ಜಿಲ್ಲೆಯ ಬದರ್ವಾಸ್ ನಗರದಲ್ಲಿ ಪೊಲೀಸರು ಬಂಧಿಸಿದ್ದಾರೆ.
ಬುಡಕಟ್ಟು ಪಂಗಡಕ್ಕೆ ಸೇರಿದ್ದ ವಿಜಯಸಿಂಗ್ ಎಂಬಾತ ತನ್ನ ಪತ್ನಿಯೊಂದಿಗೆ ಕ್ರೈಸ್ತಧರ್ಮವನ್ನು ಸ್ವೀಕರಿಸಿದ್ದ. ಈ ದಂಪತಿಗಳೇ ದೇವರ ಹೆಸರಿನಲ್ಲಿ ಜನರನ್ನು ವಂಚಿಸುತ್ತಿದ್ದು ಇದೀಗ ಪೊಲೀಸರ ಆತಿಥ್ಯದಲ್ಲಿರುವವರು.
ಈ ವಿಜಯ್ ಸಿಂಗ್ ಎಂಬಾತ ಅತ್ಯಂತ ನಿಗೂಢ ರೀತಿಯಲ್ಲಿ ಕಾಣೆಯಾಗಿದ್ದ. ಈತ ಬದರ್ವಾಸ್‌ನ ತರಕಾರಿ ಮಾರುಕಟ್ಟೆಯಲ್ಲಿ ಗಾರ್ಡ್ ಆಗಿದ್ದು ಜೂನ್ 3ರಂದು ಇದ್ದಕ್ಕಿದ್ದಂತೆ ಕಾಣೆಯಾಗಿದ್ದ. ತರಕಾರಿ ಮಾರುಕಟ್ಟೆಯ ಬೀಗ ಒಡೆದಿತ್ತು ಮತ್ತು ಇದರಲ್ಲಿ ರಕ್ತದ ಕಲೆಗಳು ಕಾಣುತ್ತಿದ್ದವು. ಗಾರ್ಡ್‌ನನ್ನು ಕೊಲೆ ಮಾಡಿರಬಹುದು ಅಥವಾ ಅಪಹರಿಸಿರಬಹುದು ಎಂಬುದಾಗಿ ಊಹಿಸಲಾಗಿತ್ತು.
ಇದೇವೇಳೆ, ಸಿಂಗ್ ಪತ್ನಿ ಬದ್ಲಿಬಾಯ್, ತನ್ನಪತಿ ಏಸುಕ್ರಿಸ್ತನ ದಯೆಯಿಂದ ಬದುಕಿ ಬರುತ್ತಾನೆ ಎಂದು ಹೇಳಲು ಆರಂಭಿಸಿದ್ದಳು. ಇನ್ನೊಂದೆಡೆ ಪೊಲೀಸರು ಅದಾಗಲೇ ತನಿಖೆ ಆರಂಭಿಸಿದ್ದು, ಸಿಂಗ್ ಗುಜರಾತಿನ ದಾಹೋಡ್ ಎಂಬಲ್ಲಿದ್ದಾನೆ ಎಂಬ ವಿಚಾರವನ್ನು ಪತ್ತೆಮಾಡಿದ್ದರು. ಅಲ್ಲಿಗೆ ಧಾವಿಸಿದ ಪೊಲೀಸ್ ತಂಡ ಆತನನ್ನು ಬಂಧಿಸಿದ್ದಾರೆ.
ಏಸುಕ್ರಿಸ್ತನ ಮಹಿಮೆಯನ್ನು ವೈಭವೀಕರಿಸಲು ದಂಪತಿಗಳು ಈ ಯೋಜನೆ ಮಾಡಿದ್ದಾಗಿ ಅವರು ತನಿಖೆಯ ವೇಳೆಗೆ ಒಪ್ಪಿಕೊಂಡಿದ್ದಾರೆ.
ಮಾರುಕಟ್ಟೆಯಲ್ಲಿ ಪತ್ತೆಯಾಗಿರುವ ರಕ್ತದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿದ್ದು ವರದಿಗೆ ಕಾಯಲಾಗುತ್ತಿದೆ ಎಂದು ಸಿಟಿ ಇನ್ಸ್‌ಪೆಕ್ಟರ್ ಎಸ್.ಎಸ್. ತೋಮಾರ್ ಹೇಳಿದ್ದಾರೆ. ಜನರ ಹಾದಿತಪ್ಪಿಸಲು ಯತ್ನಿಸಿರುವ ಈ ದಂಪತಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಅವರು ತಿಳಿಸಿದ್ದಾರೆ. |