ತನ್ನ ಬಂದೂಕಿನಿಂದ ಹಾರಿಸಿದ ಗುಂಡಿನಿಂದ ಹಲವಾರು ಮಂದಿಯ ಜೀವವನ್ನು ಹೊಸಕಿ ಹಾಕಿರುವ ಪಾಕಿಸ್ತಾನಿ ಉಗ್ರ ಅಜ್ಮಲ್ ಅಮೀಲ್ ಕಸಬ್, ತಾನು ಮಾಡಿದ ಕೃತ್ಯದ ಪೋಟೋಗಳನ್ನು ನ್ಯಾಯಾಲಯದಲ್ಲಿ ನೋಡುತ್ತಿರುವಂತೆ ಕುಸಿದ ಘಟನೆ ಸೋಮವಾರ ಸಂಭವಿಸಿದೆ.
ಅದಾಗ್ಯೂ, ತನ್ನ ಆರೋಗ್ಯ ಸರಿಇಲ್ಲ ಎಂದು ಆತ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಿಗೆ ತಿಳಿಸಿದ್ದ.
ಸೆಬಾಸ್ಟಿನ್ ಡಿಸೋಜ ಎಂಬ ಫೊಟೋಜರ್ನಲಿಸ್ಟ್ ನ್ಯಾಯಾಲಯದಲ್ಲಿ ಕಸಬ್‌ನನ್ನು ಗುರುತಿಸಿದ್ದು, ನವೆಂಬರ್ 26ರಂದು ಛತ್ರಪತಿ ಶಿವಾಜಿ ಟರ್ಮಿನಸ್‌ನಲ್ಲಿ ಗುಂಡುಹಾರಿಸಿದ ಇಬ್ಬರು ಬಂದೂಕುಧಾರಿಗಳಲ್ಲಿ ಈತ ಒಬ್ಬ ಎಂದು ಹೇಳಿದರಲ್ಲದೆ, ತನ್ನ ಹೇಳಿಕೆಗೆ ಆಧಾರವೆಂಬಂತೆ 100 ಫೋಟೋಗಳನ್ನು ಒಪ್ಪಿಸಿದರು.
ಇದರಲ್ಲಿ ಕಸಬ್ ತನ್ನ ಸಹಚರನೊಂದಿಗೆ ಅಮಾನುಷವಾಗಿ ಗುಂಡುಹಾರಿಸುತ್ತಿರುವುದು ಮತ್ತು ಬಂದೂಕು ಹಿಡಿದಿರುವುದು ನಿಚ್ಚಳವಾಗಿದೆ. ನ್ಯಾಯಾಲಕ್ಕೆ ಡಾಕ್ಯುಮೆಂಟರಿ ಎವಿಡೆನ್ಸ್ ನೀಡಿದ ಪ್ರಥಮ ಸಾಕ್ಷಿ ಡಿಸೋಜಾ ಆಗಿದ್ದಾರೆ.
ತಾನು ಪತ್ರಿಕೆಯೊಂದಕ್ಕೆ ಕೆಲಸಮಾಡುತ್ತಿರುವುದಾಗಿ ಹೇಳಿರುವ ಡಿಸೋಜ, ತಾಜ್ ಹೋಟೇಲಿನಲ್ಲಿ ಭಯೋತ್ಪಾದನಾ ದಾಳಿಯ ಸುದ್ದಿತಿಳಿದು ಅಲ್ಲಿಗೆ ತೆರಳಲು ತನ್ನ ಕಚೇರಿಯಿಂದ ಹೊರಬರುತ್ತಲೇ ರೈಲ್ವೇ ನಿಲ್ದಾಣದಲ್ಲಿ ದೊಡ್ಡ ಸ್ಫೋಟದ ಸದ್ದುಕೇಳಿ ಅಲ್ಲಿಗೆ ತೆರೆಳಿದಾಗ ಈ ಇಬ್ಬರು ಉಗ್ರರು ರೈಲ್ವೇ ನಿಲ್ದಾಣದಲ್ಲಿ ಯರ್ರಾಬಿರ್ರಿಯಾಗಿ ಗುಂಡುಹಾರಿಸುತ್ತಿರುವುದು ಕಂಡುಬಂದಿದ್ದು, ಆ ಸಂದರ್ಭದಲ್ಲಿ ತಾನು ಈ ಚಿತ್ರಗಳನ್ನು ತೆಗೆದಿರುವುದಾಗಿ ಹೇಳಿದರು. ನ್ಯಾಯಾಲಯವು ಇವುಗಳಲ್ಲಿ 20 ಫೋಟೋಗಳನ್ನು ತನ್ನಬಳಿ ಇರಿಸಿಕೊಂಡಿತು.
ತನ್ನ ದುಷ್ಕೃತ್ಯದ ಫೋಟೋ ತೆಗೆಯಲಾಗಿದೆ ಎಂಬ ಅರಿವು ಇದ್ದಿರದ ಕಟಕಟೆಯಲ್ಲಿ ಕುಳಿತಿದ್ದ ಕಸಬ್ ಕುತೂಹಲದಿಂದ ಅವುಗಳನ್ನು ವೀಕ್ಷಿಸಿ ಕುಸಿದ ಎಂದು ವರದಿಗಳು ಹೇಳಿವೆ.
ದೋಷಪೂರಿತ ಶಸ್ತ್ರಾಸ್ತ್ರಗಳು ಮುಂಬೈ ಮೇಲೆ ಉಗ್ರರು ದಾಳಿನಡೆಸಿದ ವೇಳೆ, ದೋಷಪೂರಿತ ಶಸ್ತ್ರಾಸ್ತ್ರಗಳಿಂದಾಗಿ ರೈಲ್ವೇ ನಿಲ್ದಾಣದಲ್ಲಿ ಕಸಬ್ ಮೇಲೆ ಗುಂಡು ಹಾರಿಸಲು ತಾನು ವಿಫಲವಾದೆ ಎಂದು ರೈಲ್ವೇ ಪೊಲೀಸ್‌ನ ಪೇದೆ ಹರ್ಷದ್ ಪಾಟೀಲ್ ಸೋಮವಾರ ನ್ಯಾಯಾಲಕ್ಕೆ ತಿಳಿಸಿದ್ದಾರೆ.
ವಿಶೇಷ ನ್ಯಾಯಾಧೀಶ ಎಂ.ಎಲ್. ತಹಿಲಿಯಾನಿ ಅವರ ಮುಂದೆ ಹೇಳಿಕೆ ನೀಡಿದ ಪಾಟೀಲ್, ತನಗೆ ಆ ದಿನದಂದು ಲೇಡಿಸ್ ಕಂಪಾರ್ಟ್‌ಮೆಂಟ್‌ನಲ್ಲಿ ಕರ್ತವ್ಯವಿತ್ತು ಎಂದು ಹೇಳಿದರು. ವಾಶಿಯಿಂದ ವಿಟಿಗೆ ರೈಲು ತೆರಳುತ್ತಿತ್ತು. ಸಿಎಸ್‌ಟಿಗೆ ರೈಲು ತಲುಪುತ್ತಲೇ ದಾಳಿಯ ಕುರಿತು ತಿಳಿಯಿತು ಮತ್ತು ಗುಂಡಿನ ಸದ್ದುಗಳು ಕೇಳಿತೆಂದು ತಿಳಿಸಿದರು. ತಕ್ಷಣವೇ ಸ್ಥಳಕ್ಕೆ ಧಾವಿಸಿ ತನ್ನ 303 ರೈಫಲ್‌ನಲ್ಲಿ ಕಂಬದ ಮೆರೆಯಿಂದ ಗುಂಡುಹಾರಿಸಿದ್ದು, ಅದು ಗುರಿ ತಪ್ಪಿತ್ತು. ರೈಫಲ್ ದೋಷಪೂರಿತವಾಗಿದ್ದುದು ಇದಕ್ಕೆ ಕಾರಣ ಎಂದು ಅವರು ಹೇಳಿದರು. |